ಶಿವಮೊಗ್ಗ: ದೇಶದ ಬೆನ್ನೆಲುಬಾಗಿರುವ ರೈತರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನ ಎಲ್ಲಾ ರಾಜಕೀಯ ಪಕ್ಷಗಳು ಮಾಡಬೇಕಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಚೌಕಿದಾರ್ ಇದ್ದಾರೆ ಹೊರತು ರೈತರಿಗಾಗಿ ಇಲ್ಲ ಎನ್ನುವ ಮೂಲಕ ಮೋದಿ ಅವರಿಗೆ ಟಾಂಗ್ ನೀಡಿದರು. ಈ ನಿಟ್ಟಿನಲ್ಲಿ ದೇಶದಲ್ಲಿ ಮೊದಲ ಬಾರಿಗೆ ಒಂದು ಲಕ್ಷದವರೆಗೆ ರೈತರ ಸಾಲಮನ್ನಾ ಮಾಡಿ ನೆರವಾಗಿದ್ದೇವೆ. ಬೀದಿಬದಿ ವ್ಯಾಪಾರಿಗಳ ಕಷ್ಟವನ್ನು ಅರಿತು ಬಡವರ ಬಂಧು ಯೋಜನೆಯನ್ನು ಜಾರಿ ಮಾಡಿದ್ದೇವೆ. ಅನೇಕ ಭಾಗ್ಯಗಳನ್ನು ನೀಡುವ ಮೂಲಕ ಉತ್ತಮ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಿದ್ದೇವೆ ಎಂದರು.
ಸಹಕಾರಿ ಸಚಿವ ಬಂಡೆಪ್ಪ ಖಾಶಂಪುರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಉತ್ತಮ ಪೈಪೋಟಿ ನೀಡುತ್ತಾರೆ. ಹಾಗೆಯೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ 22 ಸ್ಥಾನಗಳಲ್ಲಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಕುಟುಂಬ ರಾಜಕಾರಣ ದೇವೇಗೌಡರಿಗೆ ಯಾಕೆ ಸೀಮಿತ. ದೇಶದಲ್ಲಿ, ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಕುಟುಂಬ ರಾಜಕಾರಣ ಇದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಮಧು ಬಂಗಾರಪ್ಪ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಿಂದಲೇ ಉತ್ತಮ ಸಂದೇಶ ನೀಡುತ್ತಾರೆ ಎಂದರು.
ಬಳಿಕ ಬಿಜೆಪಿ ಪ್ರಣಾಳಿಕೆ ಬಗ್ಗೆ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಯಾವುದೇ ರೈತಪರ ಯೋಜನೆಗಳು ಇಲ್ಲ. ಅದರಲ್ಲಿ ಇರುವ ಒಂದು ಉತ್ತಮ ಅಂಶ ಎಂದರೆ ಬಡ್ಡಿ ರಹಿತ ಸಾಲ ನೀಡುತ್ತೇವೆ ಎನ್ನುವ ಅಂಶ ಮಾತ್ರ. ಉಳಿದ ಯಾವ ಅಂಶವು ರೈತರ ಪರವಾಗಿಲ್ಲ ಎಂದರು. ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಿಖಿಲ್ ಕುಮಾರಸ್ವಾಮಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು.