ಶಿವಮೊಗ್ಗ: ಹಣ ನೀಡಬೇಕೆಂದು ಶಾದ್ ನಗರದ ನಿವಾಸಿಯೊಬ್ಬರಿಗೆ ವಾಟ್ಸಪ್ ಕರೆ ಮಾಡಿ ಬೆದರಿಕೆ ಹಾಕಿದ್ದ ಬಚ್ಚನ್ ಎಂಬಾತನನ್ನು ಮುಂಬೈನಲ್ಲಿ ಬಂಧಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.
ವಾಟ್ಸಪ್ ಕರೆ ಅಷ್ಟೇ ಅಲ್ಲದೆ ಬಚ್ಚನ್ ಅಕ್ಟೋಬರ್ 25 ರಂದು ಶಾದ್ ನಗರದ ನಿವಾಸಿ ಮನೆಗೆ ತನ್ನ ಸಹಚರರನ್ನು ಕಳುಹಿಸಿ, ಮನೆಗೆ ಕಲ್ಲಿನಿಂದ ಹೊಡೆಸಿ ಬೆದರಿಕೆ ಹಾಕಿದ್ದ. ಹಣ ನೀಡದೆ ಹೋದರೆ, ಪೆಟ್ರೋಲ್ ಬಾಂಬ್ ಹಾಕುವುದಾಗಿ ಹಾಗೂ ಅವರ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: ಪುಟಾಣಿಗಳ ಕ್ರಿಕೆಟ್‌ನಲ್ಲಿ ಚೆಂಡು ಹಿಡಿದುಕೊಡುವ ಶ್ವಾನ: ವಿಡಿಯೋ ಹಂಚಿಕೊಂಡ ಸಚಿನ್
ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದರು. ಬಚ್ಚನ್ ಬೇಟೆಗಾಗಿ ಶಿವಮೊಗ್ಗ ಗ್ರಾಮಾಂತರ ಪಿಐ ಸಂಜೀವ್ ಕುಮಾರ್ ಹಾಗೂ ಕುಂಸಿ ಪಿಐ ಅಭಯ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಈತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಬಚ್ಚನ್ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ 50, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 1 ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ. ಒಟ್ಟು 53 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ.
ಬಚ್ಚನ್ ಸಹಚರರಾದ ಮಹಮದ್ ತೌಹಿದ್(19) ಮತ್ತು ಮಹಮದ್ ಬಿಲಾಲ್(21) ರನ್ನು ಈ ತಿಂಗಳ 16 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇವರಿಂದ ಮೂರು ಮೊಬೈಲ್, ಮೂರು ಡಾಂಗಲ್ ಹಾಗೂ ಒಂದು ವರ್ನಾ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.