ಶಿವಮೊಗ್ಗ: ಧರ್ಮ ಶ್ರೀ ಟ್ರಸ್ಟ್ ವತಿಯಿಂದ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬಂದಿದ್ದು, ಇದೀಗ ನನ್ನ ಮಗಳು ಆಯನೂರು ಶಮಾತ್ಮಿಕ ಮದುವೆ ಪ್ರಯುಕ್ತ 50 ಜೋಡಿಗಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ನಡೆಯುತ್ತಿರುವ ಸಾಮೂಹಿಕ ವಿವಾಹದಲ್ಲಿ ಐವತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿವೆ. ಈ ಸಾಮೂಹಿಕ ವಿವಾಹದಲ್ಲಿ ನನ್ನ ಮಗಳ ಮದುವೆ ಸಹ ನಡೆಯುತ್ತಿದೆ. ಜ. 31ರಂದು ಸಾಗರ ರಸ್ತೆಯ ಪ್ರೇರಣ ಸಭಾಂಗಣದಲ್ಲಿ ಸಾಮೂಹಿಕ ಮದುವೆ ನಡೆಯಲಿದೆ. 2 ಅಂತರ್ಜಾತಿಯ ವಿವಾಹ, 1 ವಿಧವಾ ಸೇರಿದಂತೆ ಎಲ್ಲಾ ಜಾತಿಗಳ ಒಟ್ಟು 50 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಎಲ್ಲರಿಗೂ ಮಾಂಗಲ್ಯ ಸರ ಉಚಿತವಾಗಿ ನೀಡಲಾಗಿದೆ ಎಂದರು.
ಆದಿಚುಂಚನಗಿರಿ ಶ್ರೀಗಳು, ಮಾದರ ಚನ್ನಯ್ಯ ಸ್ವಾಮೀಜಿ, ಉಪ್ಪಾರ ಸ್ವಾಮಿಗಳು, ಬೆಕ್ಕಿನ ಕಲ್ಮಠ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಿ ನವ ದಂಪತಿಗಳನ್ನ ಆಶೀರ್ವದಿಸಲಿದ್ದಾರೆ. ವಧು-ವರರಿಂದ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಲಾಗಿದೆ. ಹಾಗೆಯೇ ಅವರ ವಿವಾಹಕ್ಕೆ ಪೂರಕವಾದ ವಸ್ತುಗಳನ್ನು ನೀಡಲಾಗಿದೆ. ಶಾಸ್ತ್ರೋಕ್ತವಾಗಿ ಹಿಂದೂ ಸಂಪ್ರಾಯದಂತೆ ಎಲ್ಲರ ವಿವಾಹ ನೆರವೆರಿಸಲಾಗುತ್ತದೆ ಎಂದರು.
ವಿವಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ, ಸಚಿವರು, ಕೇಂದ್ರ ಸಚಿವರು ಹಾಗೂ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಎಲ್ಲರಿಗೂ ಟ್ರಸ್ಟ್ ವತಿಯಿಂದಲೇ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.