ಶಿವಮೊಗ್ಗ: ದೇಶದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಚಿಕಿತ್ಸೆಗೆ ಸಹಕಾರ ನೀಡದ ತಬ್ಲಿಘಿಗಳ ವರ್ತನೆಯನ್ನು ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ಖಂಡಿಸುವುದರ ಜೊತೆಗೆ ನಿಯಂತ್ರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕೊರೊನಾ ಸೋಂಕು ಹರಡುವಲ್ಲಿ ಕಾರಣವಾಗಿರುವ ತಬ್ಲಿಘಿಗಳ ಬಗ್ಗೆ ದಯೆ ತೋರಿಸುವ ಅವಶ್ಯಕತೆ ಇಲ್ಲ. ಅಲ್ಪಸಂಖ್ಯಾತ ಧಾರ್ಮಿಕ ಹಾಗೂ ರಾಜಕೀಯ ನಾಯಕರು ತಬ್ಲಿಘಿಗಳ ವರ್ತನೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂಬ ಶಂಕೆ ಇದೆ. ಅಲ್ಪಸಂಖ್ಯಾತರನ್ನು ಅನುಮಾನದಿಂದ ನೋಡುವಂತಾಗಿದೆ. ತಬ್ಲಿಘಿಗಳಿಗೆ ವಿದೇಶಿ ಭಯೋತ್ಪಾದಕರ ನಂಟಿದೆ ಎಂಬ ಸಂಶಯಕ್ಕೆ ಅವರ ವರ್ತನೆಗಳೇ ಕಾರಣವಾಗಿವೆ ಎಂದು ಆರೋಪಿಸಿದರು.
ಶಿವಮೊಗ್ಗದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರಲ್ಲಿ ಇಬ್ಬರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರನ್ನು ಹಿಡಿಯಲಾಗಿದೆ. ಹಸಿರು ವಲಯವಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆಯ ಪ್ರಕರಣದಿಂದ ಆತಂಕ ಪಡುವಂತಾಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪಕ್ಕದ ತಾಲೂಕುಗಳಾದ ಹೊನ್ನಾಳಿ, ಚನ್ನಗಿರಿಯಲ್ಲಿ ತಬ್ಲಿಘಿಗಳ ಪ್ರವೇಶದಿಂದ ಭಯ ಮೂಡಿದೆ ಎಂದು ಕಿಡಿಕಾರಿದರು.
ಸೋಂಕು ಪೀಡಿತ ತಬ್ಲಿಘಿಗಳನ್ನು ಮದರಸಾ ಮತ್ತು ಅಲ್ಪಸಂಖ್ಯಾತರ ಶಾಲೆಗಳು, ಮಸೀದಿಗಳಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಬೇಕು ಎಂದು ಆಯನೂರು ಮಂಜುನಾಥ್ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.