ಶಿವಮೊಗ್ಗ : ಸಂಸದ ಬಿ.ವೈ ರಾಘವೇಂದ್ರ ಅವರು ಭಾನುವಾರ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ಉದ್ಘಾಟನೆ ಮಾಡಿದ ನೂತನ ಸೇತುವೆ ಕಾರ್ಯಕ್ರಮದಲ್ಲಿ ಶಿಷ್ಟಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇತುವೆ ಉದ್ಘಾಟನೆ ಅಧಿಕೃತವೋ? ಅನಧಿಕೃತವೋ? ಎಂಬ ಪ್ರಶ್ನೆ ನನಗೆ ಮಾತ್ರವಲ್ಲ. ನಗರದ ಎಲ್ಲ ಜನರಲ್ಲಿ ಉದ್ಬವವಾಗಿದೆ. ಉದ್ಘಾಟನೆ ವೇಳೆ ಅಧಿಕಾರಿಗಳು ಇರಲಿಲ್ಲ. ಶಾಸಕರುಗಳು ಇರಲಿಲ್ಲ. ಸೇತುವೆ ಉದ್ಘಾಟನೆ ಕುರಿತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇಂಜಿನಿಯರ್ಗಳಿಗೆ ಫೋನ್ ಮಾಡಿ ಕೇಳಿದರೆ, ಅವರು ನಮಗೆ ಗೂತ್ತೇ ಇಲ್ಲ ಎಂದು ತಿಳಿಸಿದ್ದಾರೆ. ಸೇತುವೆಗೆ ಇನ್ನೂ ಅಧಿಕಾರಿಗಳು ಎನ್ಓಸಿ ನೀಡಿಲ್ಲ. ಅಲ್ಲದೇ, ಅವರದೇ ಪಕ್ಷದ ಎಂಎಲ್ಸಿಗಳಾದ ರುದ್ರೇಗೌಡರು, ಡಿ.ಎಸ್ ಅರುಣ್ ಅವರನ್ನು ಕರೆಯದೇ ಶಿಷ್ಟಚಾರ ಉಲ್ಲಂಘನೆ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ತರಾತುರಿಯಲ್ಲಿ ಸೇತುವೆ ಉದ್ಘಾಟನೆ ಮಾಡಿದ್ದಾರೆ. ಸೇತುವೆ ಭದ್ರತೆಯು ಯಾರ ಹೊಣೆ ಎಂದು ಪ್ರಶ್ನಿಸಿದರು.
ಕಾಮಗಾರಿ ಹಣವನ್ನು ಬಿಜೆಪಿ ಪಕ್ಷ ಹಾಕಿದೆಯೋ? ಸಾರ್ವಜನಿಕರ ತೆರಿಗೆ ಹಣ ಬಳಸಿದ್ದಾರೋ ? ಗೊತ್ತಾಗುತ್ತಿಲ್ಲ. ಸಂಸದರು ತಮ್ಮದೆ ಶೈಲಿಯಲ್ಲಿ ಇದ್ದಾರೆ. ಅವರಿಗೆ ರಾಜ್ಯ ಸರ್ಕಾರ ಬದಲಾಗಿದೆ ಎಂಬ ಮಾಹಿತಿ ಇಲ್ಲದಂತಾಗಿದೆ. ಇದು ಸರ್ಕಾರಿ ಸ್ವತ್ತು ಆಗಿದ್ದು, ಗಡಿಬಿಡಿ ಉದ್ಘಾಟನೆ ಹಿಂದೆ ಏನಿದೆ ಎಂದು ಮಂಜುನಾಥ್ ಪ್ರಶ್ನಿಸಿದರು.
ಬಿಜೆಪಿ ನಾಯಕರ ಆಸ್ತಿ ಇರುವ ಕಡೆಗೆ ಸೇತುವೆ, ರಿಂಗ್ ರೋಡ್ ಕಾಮಗಾರಿ ಬೇಗ ಮುಗಿಯುತ್ತಿವೆ. ಇದನ್ನು ಶಿವಮೊಗ್ಗ ಜನತೆ ಗಮನಿಸುತ್ತಿದ್ದಾರೆ. ತುಮಕೂರಿನಿಂದ ಶಿವಮೊಗ್ಗ ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಗಡ್ಕರಿ ಹಿಂದೆ ತಿಳಿಸಿದ್ದರು. ಈಗ ಈ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. 10 ವರ್ಷಗಳ ಹಿಂದೆ ರಸ್ತೆ ಅಗಲಿಕರಣಕ್ಕೆ ಭೂಮಿ ಸ್ವಾಧಿನಮಾಡಿಕೊಳ್ಳಲಾಗಿದೆ. ಅದಕ್ಕೆ ಇನ್ನೂ ಹಣ ನೀಡಿಲ್ಲ. ಶಿವಮೊಗ್ಗದ ಅಭಿವೃದ್ದಿ ಆಗುತ್ತಿದೆಯೋ ಅಥವಾ ತಮ್ಮಆಸ್ತಿ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರೂ ತಿಳಿಯುತ್ತಿಲ್ಲ. ಬಿಜೆಪಿ ನಾಯಕರಿಗೆ ಅನುಕೂಲಕರ ಎಂಬ ಹೆಸರಿನಲ್ಲಿ ಇವರ ಆಸ್ತಿ ಮೌಲ್ಯವನ್ನು ದುಪ್ಪಟ್ಟು ಮಾಡಿಕೊಳ್ಳಲಾಗುತ್ತಿದೆ ಎಂದು ಮಂಜುನಾಥ್ ಕಿಡಿಕಾರಿದರು.
ರಿಂಗ್ ರೋಡ್ ಅನ್ನು 15 ಕಿಮೀ ದೂರ ತೆಗೆದುಕೊಂಡು ಹೋಗಿ ಪುನಃ ಸಿಟಿ ಲಿಮಿಟ್ ಮಲ್ಲಿಗೇನಹಳ್ಳಿ ಬಳಿ ತರಲಾಗಿದೆ. ಮುಂದೆ ಶಿಷ್ಟಾಚಾರ ಉಲ್ಲಂಘನೆ ಮಾಡದೇ, ಸರಿಯಾಗಿ ಕಾರ್ಯಕ್ರಮಗಳನ್ನು ನಡೆಸಿ ಎಂದು ಕಿವಿ ಮಾತನ್ನು ಹೇಳಿದ ಮಂಜುನಾಥ್, ರಾಜ್ಯ ಸರ್ಕಾರ ಶಿವಮೊಗ್ಗ ಸಂಸದರಿಗೆ ಮಾತ್ರ ಹಣ ನೀಡಿತೇ ಹೊರತು ಬೇರೆ ಸಂಸದರಿಗೆ ಹಣ ನೀಡಲೇ ಇಲ್ಲ. ವಿಮಾನ ನಿಲ್ದಾಣಕ್ಕೆ ರಾಜ್ಯದ ಪಾಲೆಷ್ಟು ತಿಳಿಸಿ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಉಪಸ್ತಿತರಿದ್ದರು.
ಇದನ್ನೂ ಓದಿ : ಶಿವಮೊಗ್ಗ: ತುಂಗಾ ನದಿಗೆ ನಿರ್ಮಿಸಲಾದ ನೂತನ ಸೇತುವೆ ಲೋಕಾರ್ಪಣೆ