ಶಿವಮೊಗ್ಗ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಒಂದು ದಿನದ ಸತ್ಯಾಗ್ರಹ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಯಿತು. ಕೇಂದ್ರ ಸರ್ಕಾರ, ಪೌರತ್ವ ತಿದ್ದುಪಡಿ ಜಾರಿಗೆ ತಂದು ದೇಶದಲ್ಲಿ ಒಡಕು ಉಂಟು ಮಾಡುತ್ತಿದ್ದು, 'ಸಂವಿಧಾನ ಉಳಿಸಿ ಪೌರತ್ವ ರಕ್ಷಿಸಿ' ಎಂಬ ಅಭಿಯಾನ ಕೈಗೊಂಡಿರುವುದಾಗಿ ಅಭಿಯಾನ ನಿರತರು ತಿಳಿಸಿದರು.
ಪಾರ್ಟಿಯ ರಾಜ್ಯಾಧ್ಯಕ್ಷ ತಾಹೀರ್ ಮಾತನಾಡಿ, ಮೋದಿ ಸರ್ಕಾರ ಸಿಎಎ ಕಾಯ್ದೆ ಜಾರಿಗೆ ತರುವ ಮೂಲಕ ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ಈ ಕಾನೂನು ಜಾತಿ ತಾರತಮ್ಯದಿಂದ ಕೂಡಿದೆ. ಇದು ಭಾರತದ ಜಾತ್ಯತೀತತೆಗೆ ವಿರುದ್ಧವಾಗಿದೆ. ದೇಶದಲ್ಲಿ ನೋಟು ಅಮಾನೀಕರಣ ಹಾಗೂ ಜಿ.ಎಸ್.ಟಿ ಜಾರಿಗೆ ತಂದು ದೇಶದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡಿದೆ. ಸಿಎಎ ಜೊತೆಗೆ ಎನ್.ಆರ್.ಸಿ ಮತ್ತು ಎನ್.ಪಿ. ಆರ್.ನ್ನು ಜಾರಿಗೆ ತರಲು ಹೊರಟಿರುವುದು ಖಂಡನೀಯವಾಗಿದೆಯೆಂದರು.
ಈಗಾಗಲೇ ಸಿಎಎ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನವನ್ನು ನಡೆಸುತ್ತಿದೆ ಎಂದು ತಿಳಿಸಿದರು.