ಶಿವಮೊಗ್ಗ: ಮನೆಗಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಒಡವೆಗಳನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಭದ್ರಾವತಿ ಗ್ರಾಮಾಂತರ ವೃತ್ತ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ ಪ್ರಕರಣದ ಆರೋಪಿಗಳ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ನಿರ್ದೇಶನದಂತೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ತನಿಖೆ ಕೈಗೊಂಡ ವಿಶೇಷ ತನಿಖಾ ತಂಡ, ಭದ್ರಾವತಿಯ ಹೊಳೆಹೊನ್ನೂರು ರಸ್ತೆಯ ಜಯನಗರ ಗ್ರಾಮಕ್ಕೆ ಹೋಗುವ ಬಸ್ ನಿಲ್ದಾಣದ ಬಳಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಅಂತರ ಜಿಲ್ಲಾ ಆರೋಪಿಗಳ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಗಂಜಿಗೆರೆ ಗ್ರಾಮದ ಈರಪ್ಪ(61), ತಿಮ್ಮ (53) ಬಂಧಿತ ಆರೋಪಿಗಳು. ಬಂಧಿತರನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ ಪಟ್ಟಣಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ ಎಂದರು.
2018 ನೇ ಸಾಲಿನ ತೀರ್ಥಹಳ್ಳಿ ಠಾಣೆಯ 1 ಪ್ರಕರಣ, 2019 ನೇ ಸಾಲಿನ ಶಿವಮೊಗ್ಗದ ತುಂಗಾನಗರ ಠಾಣೆಯ 1 ಪ್ರಕರಣ ಹಾಗೂ 2020 ನೇ ಸಾಲಿನ ಭದ್ರಾವತಿ ಪೇಪರ್ ಟೌನ್ ಠಾಣೆಯ 1 ಪ್ರಕರಣ, ಭದ್ರಾವತಿ ಗ್ರಾಮಾಂತರ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಬಂಧಿತರಿಂದ 10,51,200 ರೂ. ಬೆಲೆಬಾಳುವ 219 ಗ್ರಾಂ ಬಂಗಾರದ ಒಡವೆ ಹಾಗೂ 25,000 ರೂ. ಮೌಲ್ಯದ 425 ಗ್ರಾಂ ತೂಕದ ಬೆಳ್ಳಿ ಒಡವೆ ಹಾಗೂ 5,000 ರೂ. ನಗದು ಸೇರಿ, 10,81,200 ರೂ. ಬೆಲೆಬಾಳುವ ಸಾಮಗ್ರಿಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ ಮತ್ತು ಭದ್ರಾವತಿ ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಈ,ಓ ಮಂಜುನಾಥ್, ಭದ್ರಾವತಿ ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ದೇವರಾಜ್, ಪೇಪರ್ ಟೌನ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಭಾರತಿ, ಎಎಸ್‌ಐ ದಿವಾಕರ್ ರಾವ್ ಹಾಗೂ ಗ್ರಾಮಾಂತರ ವೃತ್ತ ಠಾಣೆ ಸಿಬ್ಬಂದಿಗಳಾದ ಚನ್ನಕೇಶವ, ನಾಗರಾಜ್, ಆದರ್ಶ ಶೆಟ್ಟಿ, ಚಿನ್ನನಾಯ್ಕ, ಹನುಮಂತ ಅವಟಿ, ಉದಯ್ ಕುಮಾರ್, ಮೋಹನ್, ನಾಗೇಶ್, ಗಿರೀಶ್‌ನಾಯ್ಕ, ಎ.ಹೆಚ್.ಸಿ ರಾಜಣ್ಣ, ಪ್ರಭು ಪಾಲ್ಗೊಂಡಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ.ಭದ್ರಾವತಿ, ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ, ಭದ್ರಾವತಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಈ.ಓ. ಮಂಜುನಾಥ್ ಇದ್ದರು.