ಶಿವಮೊಗ್ಗ: ಮಲೆನಾಡು-ಕರಾವಳಿ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತವಾದ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಂದು ಬೆಳಗಿನ ಜಾವ ಘಾಟಿಯಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿತವಾಗಿದೆ. ಈ ಹಿನ್ನೆಲೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮಣ್ಣು ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಸ್ಥಳದಲ್ಲಿಯೇ ಬಿಡು ಬಿಟ್ಟಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗಳ ಜೊತೆ ಚರ್ಚೆ ನಡೆಸಿದರು. ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನು ವೀಕ್ಷಿಸಿದರು. ಈ ರೀತಿ ಮಣ್ಣು ಕುಸಿದಿರುವುದು ಇದೇ ಮೊದಲು.
ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಲು ಸೂಚನೆ ನೀಡಲಾಗಿದೆ. ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ಮುಂದೆ ಏನು ಮಾಡಬೇಕೆಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ರಸ್ತೆ ಅಗಲೀಕರಣದ ಸರ್ವೇ ನಡೆಸಲು 50 ಲಕ್ಷ ರೂ. ಬಿಡುಗಡೆಯಾಗಿದೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಎಷ್ಟು ಬೇಗ ಆಗುತ್ತದೆಯೂ ಅಷ್ಟು ಬೇಗ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿರುವುದಾಗಿ ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ಬಂದ್