ಶಿವಮೊಗ್ಗ: ನಟ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ಕಾಣಿಸಿಕೊಂಡಿರುವ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಚಿತ್ರ ಗಂಧದಗುಡಿ ಪ್ರೀಮಿಯರ್ ಪ್ರದರ್ಶನ ನಗರದ ಶಿವಪ್ಪ ನಾಯಕ ಮಾಲ್ನ ಭಾರತ್ ಸಿನಿಮಾಸ್ನಲ್ಲಿ ನಿನ್ನೆ ನಡೆದಿದೆ. ಪ್ರೀಮಿಯರ್ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾದಲ್ಲಿ ಅಪ್ಪು ಅವರನ್ನು ನೋಡಿ, ಖುಷಿಯಾಗುವುದರ ಜೊತೆಗೆ ಭಾವುಕರಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವಿರುವ ಟೀ ಶರ್ಟ್ ಧರಿಸಿಕೊಂಡು ಸಿನಿಮಾ ನೋಡಲು ಬಂದಿದ್ದರು. ಅಪ್ಪು ಫೋಟೋ ಮುಂದೆ ನಿಂತು ಬಾಸ್ ಬಾಸ್ ಅಪ್ಪು ಬಾಸ್ ಎಂದು ಘೋಷಣೆ ಹಾಕುತ್ತಾ ಥಿಯೇಟರ್ ಒಳಗೆ ಹೋದರು. ಟೀ ಶರ್ಟ್ ಹಿಂಭಾಗ ಅಪ್ಪುವಿನ ಚಿತ್ರ, ಮುಂಭಾಗ ಗಂಧದಗುಡಿಯ ಚಿತ್ರದಲ್ಲಿ ಡಾ.ರಾಜಣ್ಣ ಆನೆ ಮೇಲೆ ಕುಳಿತ ಚಿತ್ರ, ಅದರ ಪಕ್ಕ ಅಪ್ಪು ಇರುವ ಚಿತ್ರವನ್ಜು ಹಾಕಲಾಗಿತ್ತು.
ಗಂಧದಗುಡಿಯನ್ನು ನೋಡಲು ಒಂದು ಕುಟುಂಬದ ಮುತ್ತಜ್ಜಿ, ಅಜ್ಜಿ, ಮಗಳು ಹಾಗೂ ಮೊಮ್ಮಗಳು ಬಂದಿದ್ದು ವಿಶೇಷವಾಗಿತ್ತು. ಪ್ರೀಮಿಯರ್ ಶೋ ನೋಡಿ ಹೊರಬಂದ ಅಭಿಮಾನಿಗಳು ಭಾವುಕರಾಗಿ ಅಪ್ಪು ಸ್ಮರಿಸಿದ್ದಾರೆ. ದೇಶದ ಎಲ್ಲ ಭಾಷೆಯ ಜನರು ಈ ಚಿತ್ರವನ್ನು ನೋಡಬೇಕು, ನಮ್ಮ ಪರಿಸರ ಹಾಗೂ ಪ್ರಕೃತಿಯ ರಕ್ಷಣೆಯ ಬಗ್ಗೆ ಅಪ್ಪು ತಿಳಿಸಿದ್ದಾರೆ ಎಂದು ಅಭಿಮಾನಿಯೊಬ್ಬರು ಕಣ್ಣೀರು ಸುರಿಸಿದ್ದಾರೆ.
ಅಪ್ಪು ಕನಸಿನ ಚಿತ್ರ ಬಿಡುಗಡೆಗೆ ತಲೆ ಎತ್ತಿದ 34 ಅಡಿ ಎತ್ತರದ ಕಟೌಟ್: ಗಂಧದಗುಡಿ ಸಿನಿಮಾ ಬಿಡುಗಡೆ ಹಿನ್ನೆಲೆ ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಬ್ಯಾನರ್, ಪೊಸ್ಟರ್ ಫ್ಲೆಕ್ಸ್ಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ 34 ಅಡಿ ಎತ್ತರದ ಕಟೌಟ್ ಎಲ್ಲರ ಗಮನ ಸೆಳೆದಿದೆ.
ಗಂಧದಗುಡಿ ಕನ್ನಡ ನಾಡನ್ನು ರಾಜ್ಯದ ಜನತೆಗೆ ಮರು ಪರಿಚಯ ಮಾಡಿಸುವ ನಿಟ್ಟಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗದ ಎಲ್ಲಾ ಚಿತ್ರಮಂದಿರಗಳಲ್ಲಿ ಗಂಧದಗುಡಿ ಪ್ರದರ್ಶನ ಕಾಣಲಿದ್ದು, ನಾಲ್ಕು ದಿನದ ಶೋಗಳ ಟಿಕೆಟ್ಗಳು ಈಗಾಗಲೇ ಬುಕ್ ಆಗಿವೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಫೈಬರ್ ಪ್ರತಿಮೆ ನಿರ್ಮಿಸಿದ ತೆನಾಲಿ ಶಿಲ್ಪಿಗಳು