ಶಿವಮೊಗ್ಗ: ನಾಳೆ ಬೆಳಗ್ಗೆ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಶಿಕಾರಿಪುರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಹಿರಿಯ ಶಾಸಕ ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸಂಪುಟ ವಿಸ್ತರಣೆ ಬಳಿಕ ಕತ್ತಿ ನಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು. ಉಮೇಶ್ ಕತ್ತಿ ಅವರಿಗೆ ಮೊದಲನೆ ಪಟ್ಟಿಯಲ್ಲೇ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು.
ಇನ್ನು ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಅನಿರ್ವಾಯ ಸ್ಥಿತಿ ಇದೆ ಎಂದು ಎಲ್ಲರಿಗೂ ಮನವರಿಕೆ ಮಾಡಿದ್ದೇನೆ. ಮೂಲ ಬಿಜೆಪಿಗರಿಗೆ ಹಾಗೂ ವಲಸೆ ಬಿಜೆಪಿಗರ ನಡುವೆ ಸಚಿವ ಸ್ಥಾನದ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಇನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಹೊರಟ್ಟಿ ರಾಜಕೀಯಕ್ಕಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಬಜೆಟ್ ನಂತರ ನಿಗಮ ಮಂಡಳಿ ನೇಮಕ ಮಾಡಲಾಗುವುದು ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಪ್ರತಿ ಲೀ. ಗೆ 20 ಪೈಸೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಬಜೆಟ್ ನಲ್ಲಿ ತೀರ್ಮಾನಿಸುವುದಾಗಿ ತಿಳಿಸಿದರು.