ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಕುಂಟುತ್ತಿದೆ. ಇದು ಮುಗಿಯೋದ್ಯಾವಾಗೋ.. ಆದರೆ, ಈಗಲೇ ಏರ್‌ಪೋರ್ಟ್‌ಗೆ ಹೆಸರಿಡುವ ಬಗೆಗಿನ ನಾಮಕರಣದ ರಾಜಕಾರಣ ಜೋರಾಗಿ ನಡೀತಿದೆ.
ಈ ಕಟ್ಟಡ ಕಮಲದ ಆಕಾರದಲ್ಲಿದೆ ಎಂಬ ಅಪಸ್ವರವೂ ಇದೆ. ಆದ್ರೀಗ, ಮಲೆನಾಡಿನ ಕಣ್ಮಣಿಗಳಾದ ರಾಷ್ಟ್ರಕವಿ ಕುವೆಂಪು, ಮಾಜಿ ಸಿಎಂ ಬಂಗಾರಪ್ಪ ಹಾಗೂ ಮುತ್ಸದ್ದಿಯಾಗಿದ್ದ ಶಾಂತವೇರಿ ಗೋಪಾಲಗೌಡರು.. ಅಷ್ಟೇ ಯಾಕೆ? ಹಾಲಿ ಸಿಎಂ ಯಡಿಯೂರಪ್ಪ ಹೆಸರನ್ನೇ ಇರಿಸಬೇಕೆಂಬ ಕೂಗು ಬಲವಾಗ್ತಿದೆ.
ಹಲವು ತಾಂತ್ರಿಕ ತೊಡಕುಗಳು, ಹಣಕಾಸಿನ ಕೊರತೆಯಿಂದ 12 ವರ್ಷಗಳಿಂದಲೂ ಕಾಮಗಾರಿ ಕುಂಟುತ್ತಿದೆ. 2 ವರ್ಷದ ಹಿಂದಷ್ಟೇ ಸಿಎಂ ಯಡಿಯೂರಪ್ಪ ಏರ್‌ಪೋರ್ಟ್ ನಿರ್ಮಾಣ ಯೋಜನೆಗೆ ಮರು ಚಾಲನೆ ನೀಡಿದ್ದರು. ಆದರೂ ಈ ನಿಲ್ದಾಣದಿಂದ ವಿಮಾನಗಳು ಹಾರಾಡಲು ವರ್ಷಗಳೇ ಬೇಕು.
ಆದರೆ, ವಿವಾದ ಮಾತ್ರ ಇಲ್ಲಿ ಹಾರಾಡುತ್ತಲೇ ಇವೆ. ನಿಲ್ದಾಣದ ಕಟ್ಟಡದ ವಿನ್ಯಾಸ ಕಮಲದ ರೂಪದಲ್ಲಿದೆ ಅಂತಾ ಕಾಂಗ್ರೆಸ್ ಪಕ್ಷವೂ ಸೇರಿ ಹಲವರು ಟೀಸಿದ್ದರು. ಆದ್ರೀಗ, ನಿಲ್ದಾಣಕ್ಕೆ ಹೆಸರಿಡುವ ರಾಜಕಾರಣ ಜೋರಾಗಿದೆ. ಹಲವು ಸಮುದಾಯ, ಸಂಘಟನೆಗಳು ಹಾಗೂ ಕಲಾವಿದರು ಒಂದೊಂದು ಹೆಸರು ಸೂಚಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದಾರೆ.
ನಾಮಕಾರಣ ವಿಚಾರ ಇದೀಗ ವಾಗ್ವಾದ, ಹೋರಾಟ, ಪ್ರತಿಭಟನೆಗೂ ಕಾರಣವಾಗಿದೆ. ಸ್ಥಳೀಯ ಸಂಸದರು ಮಾತ್ರ ಈಗಲೇ ಯಾಕೆ ಆ ವಿಚಾರ ಅಂತಿದಾರೆ.
ನಿಲ್ದಾಣಕ್ಕೆ ಯಾವುದಾದ್ರೂ ಒಂದ್ ಹೆಸರಿಡಲಿ. ಆದರೆ, ಅದಕ್ಕೂ ಮೊದಲು ಏರ್‌ಪೋರ್ಟ್ ಕಾಮಗಾರಿ ಕಂಪ್ಲೀಟ್ ಆಗಲಿ.