ಶಿವಮೊಗ್ಗ: ಬರೊಬ್ಬರಿ 13 ವರ್ಷಗಳ ಬಳಿಕ ಸೊರಬ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. 13 ವರ್ಷಗಳ ಹಿಂದೆ ಸೊರಬ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹರತಾಳು ಹಾಲಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಲಭಿಸಿತ್ತು. ಕಾಂಗ್ರೆಸ್ ನಿಂದ ಮೊದಲ ಭಾರಿಗೆ ಆಯ್ಕೆಯಾಗಿ ಶಾಸಕರಾಗಿರುವ ಸೊರಬ ಕ್ಷೇತ್ರದ ನೂತನ ಶಾಸಕ ಮಧು ಬಂಗಾರಪ್ಪ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಸಂಭ್ರಮಾಚರಣೆ ನಡೆಸಿದ್ದಾರೆ.
ಸೊರಬ ಕ್ಷೇತ್ರದಿಂದ ಎರಡು ಭಾರಿ ಶಾಸಕರಾಗಿರುವ ಮಧುಬಂಗಾರಪ್ಪ ಒಂದು ಭಾರಿ ಜೆಡಿಎಸ್ ನಿಂದ ಶಾಸಕರಾದರೇ ಈ ಭಾರಿ ಕಾಂಗ್ರೆಸ್ ನಿಂದ ಆಯ್ಕೆ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಹಾಗೂ ಮಧು ಬಂಗಾರಪ್ಪ ನಡುವೆ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರುಗಳು ನಗರದ ಶಿವಪ್ಪನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಮೊದಲ ಅವಕಾಶದಲ್ಲೇ ಸಚಿವ ಸ್ಥಾನ: ಕಾಂಗ್ರೆಸ್ ನಿಂದ ಇದೇ ಮೊದಲ ಬಾರಿಗೆ ಸೊರಬ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಧು ಬಂಗಾರಪ್ಪ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಶಿವಮೊಗ್ಗ ಜಿಲ್ಲೆಯಿಂದ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸ್ಪಷ್ಟಬಹುಮತದೊಂದಿಗೆ ಗೆಲುವು ಸಾಧಿಸಿತು. ಇದಾದ ಬಳಿಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವ ಪೈಪೊಟಿ ಏರ್ಪಟ್ಟಿತ್ತು. ಬಳಿಕ ಹೈಕಮಾಂಡ್ ಡಿಕೆಶಿ ಅವರ ಮನವೋಲಿಸಿ ಡಿಸಿಎಂ ಸ್ಥಾನ ನೀಡಿ ಸಿಎಂ ಪಟ್ಟವನ್ನು ಎರಡನೇ ಬಾರಿಗೆ ಸಿದ್ದರಾಮಯ್ಯ ಅವರಿಗೆ ನೀಡಲಾಯಿತು. ಇದಾದ ಬಳಿಕ ಸಚಿವ ಖಾತೆ ಹಂಚಿಕೆ ವಿಷಯವಾಗಿಯೂ ಹಲವಾರು ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಇಂದು ಸಚಿವ ಖಾತೆ ಹಂಚಿಕೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ ಖಾತೆ ನೀಡಲಾಗಿದೆ. ಡಾ. ಜಿ ಪರಮೇಶ್ವರ್ ಅವರಿಗೆ ಗೃಹ ಖಾತೆ, ಎಂಬಿ ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ, ಕಾನೂನು ಮತ್ತು ಸಂಸದೀಯ ಖಾತೆಯನ್ನ ಹೆಚ್ಕೆ ಪಾಟೀಲ್ ಅವರಿಗೆ ಹಂಚಿಕೆ ಮಾಡಲಾಗಿದೆ.
ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಯ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ. ಇನ್ನು ಖಾತೆ ಹಂಚಿಯಕೆಯಲ್ಲಿ ಹೆಚ್ಚಿನ ಸಚಿವರಿಗೆ ನಿರೀಕ್ಷಿಸಿದ ಖಾತೆಗಳು ದೊರೆತಿಲ್ಲ. ಆದರೆ ಕಲವ ಸಚಿವರಿಗೆ ನಿರೀಕ್ಷೆಗೂ ಮೀರಿದ ಖಾತೆಗಳು ಲಭ್ಯವಾಗಿವೆ. ಹಂಚಿಕೆ ಮಾಡಲಾಗಿರುವ ಖಾತೆಗಳ ಪಟ್ಟಿಯನ್ನು ಇಂದು ಸಂಜೆ ಮುಖ್ಯಮಂತ್ರಿ ರಾಜಭವನಕ್ಕೆ ಕಳುಹಿಸಿಕೊಡಲಿದ್ದಾರೆ.
ಇದನ್ನೂ ಓದಿ: ಸಿದ್ದು ಸಂಪುಟದ ಖಾತೆ ಹಂಚಿಕೆ: ಪರಮೇಶ್ವರ್ಗೆ ಗೃಹ, ಡಿಕೆಶಿಗೆ ಜಲ, ಜಾರ್ಜ್ಗೆ ಇಂಧನ... ಖರ್ಗೆಗೆ ಯಾವ ಖಾತೆ?