ಶಿವಮೊಗ್ಗ: ಕೊರೊನಾದಿಂದ ಸೀಲ್ ಡೌನ್ ಆದ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ ಎಂದು ಸಾಗರ ತಾಲೂಕು ಸಿದ್ದಶ್ವೇರ ಕಾಲೋನಿಯ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಸಿದ್ದೇಶ್ವರ ಕಾಲೋನಿಯಲ್ಲಿ ಓರ್ವನಿಗೆ ಕೊರೊನಾ ಸೊಂಕು ತಗಲಿತ್ತು. ಇದರಿಂದ ಈ ಕಾಲೋನಿಯನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ ಡೌನ್ ಆದ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಆದರೆ ಸಿದ್ದೇಶ್ವರ ಕಾಲೋನಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕಾದ ಆನಂದಪುರಂನ ಗ್ರಾಮಾಡಳಿತ ಸಂಪೂರ್ಣ ವಿಫಲವಾಗಿದೆ.
ಇಲ್ಲಿನ ನಿವಾಸಿಗಳು ತಮಗೆ ಬೇಕಾದ ವಸ್ತುಗಳನ್ನು ತರಲು ಸೀಲ್ ಡೌನ್ ಏರಿಯಾದಿಂದ ಹೊರ ಬರುವಂತಿಲ್ಲ. ಆದರೆ ಅಗತ್ಯ ವಸ್ತುಗಳಾದ ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ತಲುಪಿಸುವಲ್ಲಿ ವಿಫಲವಾಗಿರುವ ಗ್ರಾಮ ಪಂಚಾಯತ್ ಪಿಡಿಓ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ 53 ಮನೆಗಳಿದ್ದು, ಎಲ್ಲರೂ ಸಹ ಬಡ ವರ್ಗದವರಾಗಿದ್ದು, ಕೂಲಿ ಕೆಲಸ ಮಾಡುವವರಾಗಿದ್ದಾರೆ. ಇಲ್ಲಿಗೆ ಮಾಜಿ ಜಿ.ಪಂ. ಸದಸ್ಯ ಹುನಗೋಡು ರತ್ನಾಕರ್ ಪ್ರತಿನಿತ್ಯ ಹಾಲು ಪೂರೈಕೆ ಮಾಡುತ್ತಿದ್ದಾರೆ.