ಶಿವಮೊಗ್ಗ : ಜಿಲ್ಲೆ ಸೂಕ್ಷ್ಮವಾದ ಪ್ರದೇಶವಾಗಿದ್ದು, ಇಲ್ಲಿ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕೆಂದು ತಮ್ಮ ಸಿಬ್ವಂದಿಗೆ ಸೂಕ್ತ ನಿರ್ದೆಶನ ನೀಡಿದ್ದೇನೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗಣೇಶನ ಮೆರವಣಿಗೆ ಹಾಗೂ ಈದ್ ಮಿಲಾದ್ ಕುರಿತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ನಂತರ ಅವರು ಮಾತನಾಡಿದರು.
ನಾನು ಇಂದು ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಬಂದೋಬಸ್ತ್ ಬಗ್ಗೆ ಕುರಿತು ಪೊಲೀಸರ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಸೂಚನೆ ನೀಡಿದ್ದೇನೆ. ಈಗಾಗಲೇ ನಾನು ಬೆಳಗಾವಿ, ಹುಬ್ಬಳ್ಳಿ, ಗದಗ, ಚಿತ್ರದುರ್ಗ ಸೇರಿದಂತೆ ಸುಮಾರು ಎಂಟು ಜಿಲ್ಲೆಗಳಿಗೆ ನಾನು ಭೇಟಿ ನೀಡಿ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
ಶಿವಮೊಗ್ಗಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ಗಣಪತಿ ಮೆರವಣಿಗೆಗೆ ನೀಡಲಾಗುತ್ತಿದೆ. ಸುಮಾರು 2 ಸಾವಿರ ಸಿಬ್ಬಂದಿ , 15 ಕೆಎಸ್ಆರ್ಪಿ, 1 ಐಆರ್ಬಿ ತುಕಡಿ ನೀಡಲಾಗುತ್ತಿದೆ. ನಮ್ಮ ಸಿಬ್ಬಂದಿ ಎಲ್ಲ ರೀತಿಯ ಸೂಕ್ತ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆ ಎಂದು ನೋಡಿಕೊಂಡು ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಶಿವಮೊಗ್ಗ ವ್ಯವಸ್ಥೆ ಚೆನ್ನಾಗಿದೆ. ಇಲ್ಲಿ ಮೊದಲಿನಿಂದಲೂ ಸಹ ಗಣಪತಿ ಮೆರವಣಿಗೆಯಲ್ಲಿ ಸೂಕ್ಷ್ಮವಾಗಿರುತ್ತದೆ. ಈಗ ಈದ್ ಮಿಲಾದ್ ಸಹ ಬಂದಿದೆ. ಅನೇಕ ಕಡೆ ಸಭೆ ನಡೆಸಿ ಹಬ್ಬಗಳನ್ನು ಶಾಂತಿಯುತವಾಗಿ ನಡೆಸಲು ಸೂಚನೆ ನೀಡಲಾಗಿದೆ.
ಮೆರವಣಿಗೆಗಳು ಹಿಂದೆ ಮುಂದೆ ಹಾಕಿಕೊಡಿರುವುದರಿಂದ ಯಾವುದೇ ಗಲಾಟೆ ನಡೆಯವುದಿಲ್ಲ ಎಂದೆನ್ನಿಸುತ್ತದೆ. ಆದರೂ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಗುರುವಾರ ರಾತ್ರಿ ನಡೆದ ಚಾಕು ಇರಿತ ಪ್ರಕರಣದಲ್ಲಿ ಎಂಟು ಜನರನ್ನು ಬಂಧಿಸಲಾಗಿದೆ. ಈ ಕುರಿತು ಕ್ರಮ ತೆಗೆದುಕೊಳ್ಳುವ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡಲಾಗಿದೆ. ವಿಘ್ನ ವಿನಾಯಕನನ್ನು ಶಾಂತಿಯುತವಾಗಿ ಪೂಜಿಸಿ ಶಾಂತಿಯುತವಾಗಿ ವಿಸರ್ಜಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಗಾಂಜಾ ವಿರುದ್ದ ಕಠಿಣ ಕ್ರಮ: ಗಾಂಜಾ ಕುರಿತು ನಾವು ಸಾಕಷ್ಟು ಕ್ರಮ ತೆಗೆದುಕೊಂಡು ಅನೇಕ ಕಡೆ ರೇಡ್ ಸಹ ಮಾಡಿದ್ದೇವೆ. ರಾಜ್ಯಕ್ಕೆ ಹೊರ ರಾಜ್ಯಗಳಿಂದ ಗಾಂಜಾ ಬರ್ತಾ ಇದೆ. ದಕ್ಷಿಣ ಪ್ರಾಂತ್ಯದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ನಮ್ಮ ಇಲಾಖೆಯು ಸಹ ಗಾಂಜಾಕ್ಕೆ ಕಡಿವಾಣ ಹಾಕಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸಮಾಜದ ಸಹಕಾರ ಸಹ ಬೇಕಿದೆ ಎಂದು ಎಡಿಜಿಪಿ ಹಿತೇಂದ್ರ ತಿಳಿಸಿದರು. ಈ ವೇಳೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಮಿಥುನ್ ಕುಮಾರ್ ಹಾಜರಿದ್ದರು.
ಇದನ್ನೂ ಓದಿ : ಶಿವಮೊಗ್ಗ: ಕೈಯಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ .. ಯುವಕನಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು