ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಮಾರಿಕಾಂಬ ಜಾತ್ರೆಯಂತೆ ವಿಜೃಂಭಣೆಯಿಂದ ನಡೆಯುವ ಜಾತ್ರೆ ಅಂದ್ರೆ ಅದು ಗುಡ್ಡೆಕಲ್ಲಿನ ಆಡಿಕೃತ್ತಿಕೆಯ ಹರೋಹರ ಜಾತ್ರೆ. ಈ ಜಾತ್ರೆ ಪ್ರತಿ ವರ್ಷ ಆಷಾಢ ಮಾಸದಲ್ಲಿ ಜರುಗುತ್ತದೆ. ಗುಡ್ಡೆಕಲ್ಲಿನಲ್ಲಿ ನೆಲೆಸಿರುವ ಬಾಲಸುಬ್ರಮಣ್ಯ ಸ್ವಾಮಿಗೆ ಪ್ರತಿವರ್ಷ ಅದ್ಧೂರಿಯಾಗಿ ಜಾತ್ರೆ ನಡೆಸಲಾಗುತ್ತದೆ. ಶಿವಮೊಗ್ಗ ನಗರದಲ್ಲಿ ನೆಲೆಸಿರುವ ತಮಿಳು ಸಮುದಾಯದವರು ಮುಖ್ಯವಾಗಿ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಈ ಸಮುದಾಯದ ಹರಕೆ ಹೊತ್ತವರು ಕಾವಾಡಿಗಳನ್ನು ಹೊತ್ತು ಗುಡ್ಡೆಕಲ್ಲಿಗೆ ತಮ್ಮ ಮನೆಗಳಿಂದಲೇ ಬರಿಗಾಲಿನಲ್ಲಿ ನಡೆದುಕೊಂಡು ಬಂದು ದೇವರಿಗೆ ಹರಕೆ ತೀರಿಸುತ್ತಾರೆ.
ಗುಡ್ಡೆಕಲ್ಲು ಬೆಟ್ಟವು ಸಂಪೂರ್ಣ ಕಲ್ಲಿನಿಂದಲೇ ಉದ್ಬವವಾಗಿರುವ ಗುಡ್ಡ. ಇದರಿಂದಾಗಿ ಗುಡ್ಡೆಕಲ್ಲು ಎಂದು ಕರೆಯುತ್ತಾರೆ. ಗುಡ್ಡದ ಮೇಲಿರುವ ಬಾಲಸುಬ್ರಮಣ್ಯ ದೇವಾಲಯ ಟ್ರಸ್ಟ್ ಪ್ರತಿ ವರ್ಷ ಆಷಾಢ ಮಾಸದಲ್ಲಿ ಆಡಿಕೃತ್ತಿಕೆ ಜಾತ್ರೆ ನಡೆಸಿಕೊಂಡು ಬರುತ್ತಿದೆ. ಇದು ಆಡಿಕೃತ್ತಿಕೆ ಜಾತ್ರೆಯಾದರೂ ಸಹ ಇದನ್ನು ಗುಡ್ಡೆಕಲ್ಲು ಜಾತ್ರೆ ಎಂದೇ ಕರೆಯುತ್ತಾರೆ.
ಆಷಾಢ ಮಾಸದಲ್ಲಿ ನಡೆಯುವ ಈ ಜಾತ್ರೆಗೆ ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣದಿಂದ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ, ಭಕ್ತರು ಕಾವಾಡಿಗಳನ್ನು ಹೊತ್ತು ತರುತ್ತಾರೆ. ಇದರಲ್ಲಿ ವಿವಿಧ ಗಾತ್ರದ ಕಾವಾಡಿಗಳಿರುತ್ತವೆ. ಕಾವಾಡಿ ಹೊತ್ತು ತರುವಾಗ ಬಾಯಿಗೆ ತ್ರಿಶೂಲ ಚುಚ್ಚಿಕೊಳ್ಳುತ್ತಾರೆ. ಕೆಲ ಭಕ್ತರು ಬೆನ್ನಿಗೆ ಚುಚ್ಚಿಕೊಂಡು ಕಾವಾಡಿಗಳನ್ನು ಎಳೆದುಕೊಂಡು ಬರುತ್ತಾರೆ. ಹೀಗೆ ಬರುವ ಇವರಿಗೆ ಯಾವುದೇ ಗಾಯವಾಗಲಿ, ರಕ್ತವಾಗಲಿ ಬರುವುದಿಲ್ಲ.
ಭಕ್ತರು ಗುಡ್ಡೆಕಲ್ಲಿಗೆ ಬಂದು ದೇವರ ದರ್ಶನ ಪಡೆದುಕೊಂಡು ಪುನೀತರಾಗುತ್ತಾರೆ. ದೇವಾಲಯಕ್ಕೆ ಬರುವ ಪುರುಷ ಹಾಗೂ ಮಹಿಳಾ ಭಕ್ತರಿಗೆ ವಿಶೇಷ ಸರದಿ ಸಾಲುಗಳನ್ನು ಮಾಡಿ ದೇವಾಲಯದ ಒಳಕ್ಕೆ ಬಿಡಲಾಗುತ್ತದೆ. ದೇವರ ದರ್ಶನ ಪಡೆದುಕೊಂಡು ಬರುವ ಭಕ್ತರಿಗೆ ದೇವಸ್ಥಾನ ಟ್ರಸ್ಟ್ ಪ್ರಸಾದ ವ್ಯವಸ್ಥೆ ಮಾಡಿದೆ. ಹರಕೆ ಹೊತ್ತುಕೊಂಡಂತೆ ಸುಬ್ರಮಣ್ಯನ ವಾಹನ ನವಿಲಿಗೆ ಉಪ್ಪು ಸರ್ಮಪಿಸುತ್ತಾರೆ. ನಂತರ ಹಣ್ಣು ಕಾಯಿ ನೈವೇದ್ಯ ಮಾಡಿಸಿಕೊಂಡು ಬರುತ್ತಾರೆ.
ಸುಬ್ರಮಣ್ಯನ ಮೂರ್ತಿ ಪ್ರತಿಷ್ಠಾಪಿಸಲು ಸಿದ್ಧತೆ: ''ಆಡಿಕೃತ್ತಿಕೆ ಜಾತ್ರೆಯು ಪ್ರತಿ ವರ್ಷ ಎರಡು ದಿನ ನಡೆಯುತ್ತದೆ. ಲಕ್ಷಾಂತರ ಭಕ್ತರು ಶಿವಮೊಗ್ಗ ಹಾಗೂ ಭದ್ರಾವತಿಯಿಂದ ಆಗಮಿಸುತ್ತಾರೆ. ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯವನ್ನು ನಮ್ಮ ಟ್ರಸ್ಟ್ ಮಾಡಿಕೊಡುತ್ತಿದೆ. ಈ ವರ್ಷ ಗುಡ್ಡದ ಮೇಲೆ 151 ಅಡಿ ಎತ್ತರದ ಸುಬ್ರಮಣ್ಯನ ಮೂರ್ತಿ ಪ್ರತಿಷ್ಠಾಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ'' ಎನ್ನುತ್ತಾರೆ ದೇವಾಲಯ ಟ್ರಸ್ಟ್ನ ಉಪಾಧ್ಯಕ್ಷ ಸಂಪತ್.
''ಜಾತ್ರೆಗೆ ನಾವು ಪ್ರತಿವರ್ಷ ಬರುತ್ತಿದ್ದೇವೆ. ಕೆಲ ವರ್ಷಗಳ ಹಿಂದೆ ನಮ್ಮ ಮಗನಿಗೆ ಹುಷಾರಿಲ್ಲದಾಗಿತ್ತು. ಈ ವೇಳೆ ದೇವರಿಗೆ ಹರಕೆ ಹೊತ್ತುಕೊಂಡಿದ್ದು, ಮಗ ಗುಣಮುಖನಾಗಿದ್ದ. ಇದರಿಂದ ನಾವು ಕಳೆದ 10 ವರ್ಷಗಳಿಂದ ತಪ್ಪದೆ ಜಾತ್ರೆಗೆ ಬರುತ್ತಿದ್ದೇವೆ'' ಎಂದು ಭಕ್ತೆ ಶ್ವೇತಾ ಹೇಳಿದರು.
''ಹರೋಹರ ಜಾತ್ರೆಗೆ ನಾವು ತಪ್ಪದೆ ಬರುತ್ತೇವೆ. ಇಲ್ಲಿನ ದೇವರ ಶಕ್ತಿ ಅಪಾರ. ನಂಬಿದವರನ್ನು ಕೈ ಬಿಡುವುದಿಲ್ಲ'' ಎಂದು ಮತ್ತೋರ್ವ ಭಕ್ತೆ ಉಮಾ ತಿಳಿಸಿದರು.
ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ದಾವಣಗೆಯ ಶ್ರೀ ದುರ್ಗಾಂಬಿಕಾ ಎಡೆ ಜಾತ್ರೆ: ಮಳೆಗಾಗಿ ವಿಶೇಷ ಪ್ರಾರ್ಥನೆ