ಶಿವಮೊಗ್ಗ: ವನ್ಯಜೀವಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ 1970ರ ದಶಕದಲ್ಲೇ ಕಾನೂನು ಜಾರಿಗೆ ತಂದು ಅನುಷ್ಠಾನ ತಂದಿದೆ. ಕಾಯ್ದೆಯನ್ವಯ ವನ್ಯಜೀವಿ ಹತ್ಯೆಯಾದರೆ ಕನಿಷ್ಠ 3 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಪ್ರಾಣಿಗಳ ಹತ್ಯೆ ತಡೆದಷ್ಟು ಹೆಚ್ಚಾಗುತ್ತಿವೆ.
ಕಳೆದ ಒಂದು ವರ್ಷದಲ್ಲಿ 44 ವನ್ಯಜೀವಿ ಬೇಟೆ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗ ವಿಭಾಗ ಮತ್ತು ಉಪ ವಿಭಾಗದಲ್ಲಿ 14, ಭದ್ರಾವತಿ ವಿಭಾಗದಲ್ಲಿ 7, ಸಾಗರ ಉಪ ವಿಭಾಗದಲ್ಲಿ 23 ಪ್ರಕರಣಗಳು ನಡೆದಿವೆ.
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ್ದರೂ ಕಾಡಂಚಿನ ವ್ಯಾಪ್ತಿಯಲ್ಲಿ ವಾಸಿಸುವ ಗ್ರಾಮಸ್ಥರು ಈ ಕೃತ್ಯಗಳನ್ನು ಮತ್ತಷ್ಟು ಮುಂದುವರೆಸಿದ್ದು, ಜಿಂಕೆ ಹಾಗೂ ಕಾಡಂದಿಗಳೇ ಹೆಚ್ಚು ಬಲಿಯಾಗುತ್ತಿವೆ.
ಸಾಗರ ವಿಭಾಗದಲ್ಲಿ ಅಪರೂಪದ ಕೆಂದಳಿಲು, ಪುನುಗು ಬೆಕ್ಕು ಬೇಟೆ ಎರಡು ಪ್ರಕರಣಗಳು ನಡೆದಿವೆ. ಕಾಡಂಚಿನ ಗ್ರಾಮಸ್ಥರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಹಾಕುವ ಬಲೆಗಳಿಂದ ಎಷ್ಟೋ ಪ್ರಾಣಿಗಳು ಜೀವ ತೆತ್ತಿವೆ. ಆದರೆ, ಅವು ಯಾವುದು ಬೆಳಕಿಗೆ ಬಂದಿಲ್ಲ.
ಕಾಡಾನೆ, ಹುಲಿ, ಚಿರತೆ ಬೇಟೆ ನಡೆದಿಲ್ಲ: ಜಿಲ್ಲೆಯಲ್ಲಿ ಪ್ರಥಮ ಶ್ರೇಣಿಗೆ ಒಳಪಟ್ಟಿರುವ ಕಾಡಾನೆ, ಹುಲಿ, ಚಿರತೆಯಂತಹ ಪ್ರಾಣಿಗಳ ಬೇಟೆಗಳು ಈವರೆಗೂ ನಡೆದಿಲ್ಲ. ಸಾಗರದ ಆನಂದಪುರಂ ಬಳಿ ಚಿರತೆ ಉಗುರು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬಂಧಿಸಿದ್ದರು. ಶಿವಮೊಗ್ಗದ ಕುಂಸಿ ಹಾಗೂ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಿಂಕೆ ಬೇಟೆ ಪ್ರಕರಣದಲ್ಲಿ ಅರಣ್ಯ ಇಲಾಖೆಕ್ಕಿಂತ ಪೊಲೀಸರೇ ದಾಳಿ ನಡೆಸಿ ಆರೋಪಿಗಳನ್ನು ಜೈಲಿಗಟ್ಟಿದ್ದರು.