ಶಿವಮೊಗ್ಗ: ನಗರ ಹೊರವಲಯದ ರತ್ನಗಿರಿ ಲೇಔಟ್ನಲ್ಲಿ ಮನೆಯೊಂದರ ಹೊರಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವುದರಿಂದ ಸ್ಥಳೀಯರು ಆಂತಕಕ್ಕೆ ಒಳಗಾಗಿದ್ದಾರೆ.
ರತ್ನಗಿರಿ ಲೇಔಟ್ ನಿವಾಸಿ ಎಲ್ಐಸಿ ಅಧಿಕಾರಿ ಲೋಹಿತಾಕ್ಷಿ ಎಂಬುವರ ಮನೆ ಮುಂದೆ ಇಂದು ಮುಂಜಾನೆ ಆಂಬ್ಯುಲೆನ್ಸ್ನಲ್ಲಿ ಓರ್ವ ವೃದ್ಧನನ್ನು ತಂದು ಬಿಟ್ಟು ಹೋಗಲಾಗಿತ್ತು. ಈ ವ್ಯಕ್ತಿ ಮನೆ ಮುಂದೆಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಸಾವನ್ನಪ್ಪಿದ ವ್ಯಕ್ತಿ ಯಾರು? ಯಾವ ಕಾರಣಕ್ಕೆ ಸಾವನ್ನಪ್ಪಿದ? ಕೊರೊನಾದಿಂದ ಸಾವನ್ನಪ್ಪಿದರಬಹುದೇನೋ ಎಂಬ ಆಂತಕವನ್ನು ಲೇಔಟ್ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆ ನಿರ್ಲಕ್ಷ್ಯ:
ಮೃತ ವ್ಯಕ್ತಿಯು ಬಿಸಿಲಲ್ಲಿ ಬಳಲುತ್ತಿದ್ದಾಗ ಸ್ಥಳೀಯರು 108ಕ್ಕೆ ಕರೆ ಮಾಡಿದರೆ ಅವರು ತಕ್ಷಣ ಬಾರದೆ ಹೋದಾಗ ವ್ಯಕ್ತಿ ಮೃತಪಟ್ಟಿದ್ದಾನೆ. ನಂತ್ರ ಬಂದ 108 ಆ್ಯಂಬುಲೆನ್ಸ್ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿ ಶವ ತೆಗೆದುಕೊಂಡು ಹೋಗದೆ ಅಲ್ಲೆ ಬಿಟ್ಟು ಹೋಗಿದ್ದಾರೆ. ನಂತ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದಾರೆ.
ಇನ್ನು ವ್ಯಕ್ತಿ ಸಾವಿಗೆ ಕಾರಣ ತಿಳಿಯದ ಕಾರಣ ಬೇಗ ಬನ್ನಿ ಎಂದಾಗ ಸಿಬ್ಬಂದಿ ಬಂದು ಶವವನ್ನು ಪ್ಯಾಕ್ ಮಾಡಲು ಪ್ಲಾಸ್ಟಿಕ್ ತರಲು ಹೋದವರು ಸುಮಾರು ಎರಡು ಗಂಟೆ ಬಿಟ್ಟು ಬಂದಿದ್ದಾರೆ. ಇದರಿಂದ ಸ್ಥಳೀಯರು ಆರೋಗ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಾ. ಸವಣೂರು ಹಾಗೂ ಅವರ ಸಿಬ್ಬಂದಿ ಶವಕ್ಕೆ ಪ್ಲಾಸ್ಟಿಕ್ ಸುತ್ತಿ ಶವವನ್ನು ಅಲ್ಲಿಂದ ರವಾನೆ ಮಾಡಿದ್ದಾರೆ.
ನಂತರ ಮೃತನ ಹೆಸರು ಪತ್ತೆಯಾಗಿದೆ. ಮೃತನ ಹೆಸರು ಮಂಜುನಾಥ್(68). ಇವರು ಲೋಹಿತಾಕ್ಷಿ ಎಂಬವರ ಪತಿಯಾಗಿದ್ದು, ಮನೆ ಬಿಟ್ಟು ಹೋಗಿ 15 ವರ್ಷಗಳೇ ಆಗಿತ್ತಂತೆ. ಇಷ್ಟು ದಿನ ಎಲ್ಲಿದ್ದರು ಎಂಬ ಮಾಹಿತಿ ಸ್ಥಳೀಯರಿಗೆ ಇರಲಿಲ್ಲ. ಇಂದು ಬೆಳಗ್ಗೆ ಇವರನ್ನು ಕನಕಪುರದಿಂದ ಅಂಬ್ಯುಲೆನ್ಸ್ನಲ್ಲಿ ತಂದು ಹೊರಗಡೆ ಬಿಟ್ಟು ಹೋಗಿದ್ದಾರೆ. ಆದರೆ ಲಾಕ್ಡೌನ್ ಹಿನ್ನೆಲೆ ಲೋಹಿತಾಕ್ಷಿ ಮಗಳ ಜೊತೆಯಲ್ಲಿ ತವರು ಮನೆ ದಾವಣಗೆರೆಗೆ ಹೋಗಿದ್ದಾರೆ. ವಿಷಯ ತಿಳಿದ ನಂತ್ರ ಅವರು ಮನೆಗೆ ವಾಪಸ್ ಆಗಿದ್ದಾರೆ. ಪತಿಯ ಮೃತಹವನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದರು. ನಂತ್ರ ಅವರನ್ನು ಸಂಬಂಧಿಗಳು ಸಮಾಧಾನ ಮಾಡಿದರು. ಮೃತ ಮಂಜುನಾಥ್ ಕುವೆಂಪು ವಿವಿಯಲ್ಲಿ ಕೆಲಸದಲ್ಲಿದ್ದು, ನಿವೃತ್ತಿಯಾಗಿದ್ದರು. ಅವರಿಗೆ ಶುಗರ್ ಹಾಗೂ ಜಾಂಡಿಸ್ ಕಾಯಿಲೆ ಇತ್ತು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಅವರ ಶವ ಪರೀಕ್ಷೆ ನಡೆಸಿದ ನಂತ್ರವಷ್ಟೇ ಸಾವಿಗೆ ಕಾರಣ ತಿಳಿದು ಬರಬೇಕಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.