ಶಿವಮೊಗ್ಗ: ಸ್ನೇಹಿತನನ್ನು ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಶಿವಮೊಗ್ಗ ಎರಡನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ. 2013ರಲ್ಲಿ ಗಾಜನೂರು ಗ್ರಾಮದ ರಾಘವೇಂದ್ರನ(28) ಕೊಲೆ ಮಾಡಲಾಗಿತ್ತು. ಗಾಜನೂರು ಪಕ್ಕದ ಇಂದಿರಾನಗರದ ನಿವಾಸಿ ದುರ್ಗಪ್ಪ(29) ತನ್ನ ಜೊತೆಗಾರರ ಜೊತೆ ಸೇರಿ ಕೊಲೆ ಮಾಡಿದ್ದನು.
ದುರ್ಗಪ್ಪ ಹಾಗೂ ರಾಘವೇಂದ್ರ ಇಬ್ಬರು ಸ್ನೇಹಿತರು. ಇವರಿಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆಯಾಗಿತ್ತು. ಇದರಿಂದ ಕೋಪಗೊಂಡಿದ್ದ ದುರ್ಗಪ್ಪ ಗಾಜನೂರಿನ ಚಾನಲ್ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಘವೇಂದ್ರನನ್ನು ಉಮೇಶ್, ಸುರೇಂದ್ರ, ಶಿವಶಂಕರಪ್ಪ ಹಾಗೂ ಲೋಕೇಶಪ್ಪ ಜೊತೆಗೂಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಈ ಕುರಿತು ರಾಘವೇಂದ್ರನ ಸಹೋದರ ತುಂಗಾನಗರ ಪೊಲೀಸರಿಗೆ ದೂರು ನೀಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಂದಿನ ಡಿವೈಎಸ್ಪಿ ರಾಮನಾಯ್ಕ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
ಪ್ರಕರಣದ ವಾದ-ಪ್ರತಿವಾದ ಅಲಿಸಿದ ನ್ಯಾಯಾಧೀಶ ಶಿವಪ್ರಸಾದ್, ಇಂದು ಶಿಕ್ಷೆ ಪ್ರಕಟಿಸಿದ್ದಾರೆ. ರಾಘವೇಂದ್ರನ ಕೊಲೆ ಮಾಡಿದ್ದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ದುರ್ಗ ಅಲಿಯಾಸ್ ದುರ್ಗಪ್ಪ, ಉಮೇಶ್, ಸುರೇಂದ್ರ ಹಾಗೂ ಶಂಕರನಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲರಾದರೆ ಮತ್ತೆ ಆರು ತಿಂಗಳು ಹೆಚ್ಚುವರಿ ಸಾದಾ ಶಿಕ್ಷೆ ವಿಧಿಸಿದೆ.