ಶಿವಮೊಗ್ಗ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ನಡೆಸಿದ ಆರೋಪಿಗೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಶಿವಮೊಗ್ಗದ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.
9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಬರ್ಕತ್ ಅಲಿಯಾಸ್ ಮೊಹಮ್ಕದ್ ಗೌಸ್ ಫೀರ್ ಎಂಬಾತನಿಗೆ ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡವನ್ನು ವಿಧಿಸಿ ಶಿವಮೊಗ್ಗದ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.
2019 ರ ಮಾರ್ಚ್ 11 ರಂದು ಬರ್ಕತ್ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಕುರಿತು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಮಹಿಳಾ ಪಿಎಸ್ಐ ಲತಾ ಅವರು ತನಿಖೆ ಕೈಗೊಂಡು ಆರೋಪಿ ವಿರುದ್ಧ ಕಲಂ 376 (2) (ಎನ್)(ಎಫ್) ಮತ್ತು ಕಲಂ 5 (ಎನ್), 06 ಆಫ್ ಪೋಕ್ಸೋ 2012 ರ ಕಾಯ್ದೆಯಂತೆ ಜಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು.
ಸರ್ಕಾರಿ ವಕೀಲ ಸತೀಶ್ ವಾದ ಮಂಡನೆ ಮಾಡಿದ್ದು, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ದಯಾನಂದ ಅವರು ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಇದೀಗ ಆದೇಶ ಹೊರಡಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಮತ್ತೆ 6 ತಿಂಗಳು ಸಾದಾ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ಬಾಲಕಿಗೆ 48 ಸಾವಿರ ರೂ. ನೀಡಬೇಕು ಎಂದು ತಿಳಿಸಲಾಗಿದೆ.