ಶಿವಮೊಗ್ಗ: ನಾಯಿಗಳನ್ನು ಜೀವಂತ ಹೂತು ಹಾಕಿದ ಪ್ರಕರಣ ಸಂಬಂಧ ಒಟ್ಟು 12 ಜನರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸೆಪ್ಟಂಬರ್ 7ರಂದು ಭದ್ರಾವತಿ ತಾಲೂಕಿನ ಕಂಬದಾಳು- ಹೂಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಜೀವಂತವಾಗಿ ಹೂತು ಹಾಕಲಾಗಿತ್ತು.
ಈ ಪ್ರಕರಣದಲ್ಲಿ ನಾಯಿ ಹಿಡಿದು ಮಾರಕ ಚುಚ್ಚುಮದ್ದು ನೀಡಿದ ವ್ಯಕ್ತಿಗಳು, ಇಬ್ಬರು ಪಂಚಾಯತ್ ಸದಸ್ಯರು, ಜೆಸಿಬಿ ಆಪರೇಟರ್, ಪಂಚಾಯತ್ ಕಾರ್ಯದರ್ಶಿ, ಪಂಚಾಯತ್ ಬಿಲ್ ಕಲೆಕ್ಟರ್ ಸೇರಿ ಒಟ್ಟು 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದ ಕಾರಣ ನಾಯಿಗಳನ್ನು ಹಿಡಿಯಲು ಮೈಸೂರು ಮೂಲದ ವ್ಯಕ್ತಿಗಳಿಗೆ ಸೂಚನೆ ನೀಡಲಾಗಿತ್ತು. ಇದು ಗ್ರಾಮ ಪಂಚಾಯತ್ ಸಭೆಯಲ್ಲಿ ಮಂಡನೆ ಮಾಡಿ, ಒಪ್ಪಿಗೆ ಪಡೆದು ನಾಯಿ ಹಿಡಿಯಲು ದರ ನಿಗದಿ ಮಾಡಿ, ನಾಯಿ ಹಿಡಿದ ನಂತರ ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿ ಪುನಃ ಅವುಗಳನ್ನು ಜೀವಂತವಾಗಿ ಬಿಡಬೇಕು ಎನ್ನುವ ತೀರ್ಮಾನವಾಗಿತ್ತು.
ಇದನ್ನೆಲ್ಲಾ ಮಾಡದೆ ಪಂಚಾಯತ್ ಸದಸ್ಯರುಗಳು, ಬಿಲ್ ಕಲೆಕ್ಟರ್, ಹಾಗೂ ಪಂಚಾಯತ್ ಕಾರ್ಯದರ್ಶಿ ಸೇರಿ ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿದ್ದಾರೆ. ಈ ಕುರಿತು ಗ್ರಾಮಸ್ಥರು ಹಾಗೂ ಪ್ರಾಣಿ ದಯಾಸಂಘದವರು ದೂರು ನೀಡಿದ್ದರು. ಸದ್ಯ ಪೊಲೀಸರು ಹೂತು ಹಾಕಲಾಗಿದ್ದ 60 ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಉಳಿದಂತೆ ನಾಯಿಗಳ ಚರ್ಮ, ಕೂದಲು ಮತ್ತು ಪಿತ್ತಜನಕಾಂಗಗಳನ್ನು ಎಫ್ ಎಸ್ ಎಲ್ ಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: 150ಕ್ಕೂ ಹೆಚ್ಚು ಬೀದಿ ನಾಯಿಗಳ ಜೀವಂತ ಸಮಾಧಿ ; ಶಿವಮೊಗ್ಗದಲ್ಲಿ ಅಮಾನವೀಯತೆ