ರಾಮನಗರ : ಬಂದ್ ಮಾಡುವುದರಿಂದ ಅಭಿವೃದ್ಧಿಯಾಗುವುದಿಲ್ಲ, ಅಭಿವೃದ್ಧಿ ಬಯಸದವರು ಬಂದ್ ಮಾಡ್ತಾರೆ. ನಿನ್ನೆ ರಾಮನಗರದಲ್ಲಿ ನಡೆದ ಬಂದ್ ಹಣದ ಬಲದಿಂದ ನಡೆದಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹಾನುಭಾವ 10 ಲಕ್ಷ ರೂ. ಹಣ ಕೊಟ್ಟು ಬಂದ್ ಮಾಡಿಸಿದ್ದಾರೆ. ಅಭಿವೃದ್ಧಿ ವಿಚಾರವನ್ನು ನಾನು ಇಂಥವರಿಂದ ಕಲಿಯಬೇಕಾಗಿಲ್ಲ. ನೆನ್ನೆ ಬಂದ್ ನಡೆಸಿದವರೆಲ್ಲ ಯಾವ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬುದು ನನಗೆ ಗೊತ್ತಿದೆ. ನಗರಸಭೆ ಚುನಾವಣೆ ಹಿನ್ನೆಲೆ ಜನರ ದಿಕ್ಕು ತಪ್ಪಿಸಲು ಹೊರಟಿದ್ದಾರೆ ಅಷ್ಟೆ ಎಂದರು.
ನಾನು ಜಿಲ್ಲೆಗೆ ಬಂದ ಮೇಲೆ ಯಾವುದೇ ಕೋಮು ಗಲಭೆಗೆ ಅವಕಾಶ ಮಾಡಿಕೊಟ್ಟಿಲ್ಲ. ಬಂದ್ ಮಾಡಿದ ಮಹಾನ್ ವ್ಯಕ್ತಿಗಳು ರಾಮನಗರದ ನಗರ ವ್ಯಾಪ್ತಿಯಲ್ಲಿ 15 ಎಕರೆ ಜಾಗ ತೋರಿಸಲಿ, ಅಲ್ಲೇ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡೋಣ ಎಂದು ಬಂದ್ಗೆ ಕರೆ ನೀಡಿದ್ದ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ. ಶೇಷಾದ್ರಿ ವಿರುದ್ಧ ವಾಗ್ಧಾಳಿ ನಡೆಸಿದರು.
ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ
ನನ್ನ ಅವಧಿಯಲ್ಲಿ ಈ ಹಗರಣ ಹೊರ ಬಂದಿತ್ತು. ಆಗ ನಾನೇ ತನಿಖೆ ನಡೆಸುವಂತೆ ಆದೇಶ ಮಾಡಿದ್ದೆ. ಹಗರಣದ ಪ್ರಮುಖ ಆರೋಪಿ ದುಬೈಗೆ ಪರಾರಿಯಾಗಿದ್ದ. ನಮ್ಮ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಕರೆತಂದಿದ್ದರು. ವಿಚಾರಣೆ ವೇಳೆ ಕುಮಾರಸ್ವಾಮಿ ಅವರಿಗೆ ಸೇರಬೇಕು ಅಂತಾ ಹಣ ಸಂಗ್ರಹಣೆ ಮಾಡಿದ್ರಂತೆ. ಆ ಹಣ ಕುಮಾರಸ್ವಾಮಿಗೆ ಸೇರಿಲ್ಲಾ ಎಂಬ ಚರ್ಚೆ ನಡೀತಿದೆ. ಯಾರ ಮೇಲೆ ಬೇಕಾದ್ರು ಕ್ರಮ ಕೈಗೊಳ್ಳಲಿ. ಜನ್ರ ಹಣವನ್ನ ಲೂಟಿ ಮಾಡಿದವರಿಗೆ ನಾನು ಈ ಕ್ಷಣದವರೆಗೆ ರಕ್ಷಣೆ ಕೊಟ್ಟವನಲ್ಲ ಎಂದು ಹೇಳಿದರು.
ಇಪ್ತಿಯಾರ್ ಕೂಟಕ್ಕೆ ಕರೆದಿದ್ರು ಅಷ್ಟೆ
ರೋಷನ್ ಬೇಗ್ ಇಪ್ತಿಯಾರ್ ಕೂಟಕ್ಕೆ ಬರಬೇಕೆಂದು ಹಠ ಹಿಡಿದಿದ್ರು. ಕೃಷ್ಣ ಕಚೇರಿಯಿಂದ ನಾನು ಅಲ್ಲಿಗೆ ಹೋಗಿದ್ದೆ ಅಷ್ಟೇ. ಆ ವೇಳೆಗೆ ಅಲ್ಲಿ ಇಬ್ಬರು ವ್ಯಕ್ತಿಗಳು ಇದ್ರು, ಅವರು ಯಾರು ಅಂತಾ ನನಗೆ ಗೊತ್ತಿರಲಿಲ್ಲ. ನಾನೇ ತನಿಖೆಗೆ ಆದೇಶ ಮಾಡಿದ ಮೇಲೆ ನನ್ನ ಪಾತ್ರ ಎಲ್ಲಿ ಇರುತ್ತದೆ ಎಂದರು.
ರಾಜಕೀಯವಾಗಿ ಸ್ಥಾನಮಾನ ಪಡೆಯಲು ಒಂದು ವರ್ಗ ಹೊರಟಿದೆ
ಒಕ್ಕಲಿಗರಿಗೆ ಮೀಸಲಾತಿ ಬೇಕು ಎಂಬ ಕೂಗಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೀಸಲಾತಿ ಹೋರಾಟ ಬಂದಾಗ ಅದರ ಬಗ್ಗೆ ಮಾತನಾಡೋಣ. ಇದು ಎಲ್ಲೊ ಒಂದು ಕಡೆ ದಾರಿ ತಪ್ಪಿ ಹೋಗುತ್ತಿದೆ. ಇಂಥ ವಿಷಯಗಳ ಮುಖಾಂತರ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವುದು ಇಲ್ಲವೆ, ರಾಜಕೀಯವಾಗಿ ಸ್ಥಾನಮಾನ ಪಡೆಯಲು ಒಂದು ವರ್ಗ ಹೊರಟಿದೆ. ಇಂಥ ಹೋರಾಟದಲ್ಲಿ ಭಾಗಿಯಾಗುವವನು ನಾನಲ್ಲ. ಸಮಯ ಬಂದಾಗ ಚರ್ಚೆ ಮಾಡೋಣ ಎಂದರು.