ರಾಮನಗರ : ಜಿಂದಾಲ್ ಗೆ ಭೂಮಿ ನೀಡಿಕೆ ವಿಚಾರದಲ್ಲಿ ಯಡಿಯೂರಪ್ಪನವರು 20 ಕೋಟಿ ಚೆಕ್ ಪಡೆದ್ದಿದ್ದನ್ನ ರಿಲೀಸ್ ಮಾಡಿದ್ದು ನಾನೇ, ಆದರೆ ಇವತ್ತು ಅವರೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನಾನು ಅವರಿಗೆ ಬನ್ನಿ ಚರ್ಚೆ ಮಾಡೋಣ ಎಂದಿದ್ದೆ, ಆದರೆ ಅವರು ಬಂದಿಲ್ಲ ಅವರ ಅವಧಿಯಲ್ಲೇ ಒಪ್ಪಂದ ಆಗಿದ್ದು ಅವರೇ ಸಹಿ ಮಾಡಿದ್ದು, ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಎಸ್ ವೈಗೆ ಟಾಂಗ್ ನೀಡಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರಿನ ದೇವೇಗೌಡ ಬ್ಯಾರೇಜ್ ನ ಸಿ ಪಾಯಿಂಟ್ ನಲ್ಲಿ ಸತ್ತೆಗಾಲದಿಂದ ಇಗ್ಗಲೂರು ಬ್ಯಾರೆಜ್ ಗೆ 540 ಕೋಟಿ ವೆಚ್ಚದಲ್ಲಿ ಪಂಪ್ ಹೌಸ್ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ ಸಿಎಂ, ರಾಮನಗರ, ಚನ್ನಪಟ್ಟಣ ಕ್ಷೇತ್ರಗಳ ಅಭಿವೃದ್ಧಿಗೆ ನಾನು ಬದ್ಧ ಸಮಯದ ಒತ್ತಡದಿಂದಾಗಿ ಕ್ಷೇತ್ರಕ್ಕೆ ಬರೋದು ಕಡಿಮೆಯಾಗಿದೆ, ಆದರೆ ಕ್ಷೇತ್ರ ಮರೆಯೋದಿಲ್ಲ. ಅದರಲ್ಲೂ ಕೆಲವರು ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎನ್ನುತ್ತಿದ್ದಾರೆ, ಅವರೆಲ್ಲರನ್ನೂ ಸಂಬಾಳಿಸಿ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿದೆ ಆದ್ದರಿಂದ ತಮ್ಮ ಸಹಕಾರ ಮುಖ್ಯ ಎಂದರು.
2 ದಿನ ಕ್ಷೇತ್ರದ ಸಮಸ್ಯೆಗಳ ಆಲಿಸುವ ಸದುದ್ದೇಶದಿಂದ ಪ್ರವಾಸ ಕೈಗೊಂಡಿದ್ದು, ಸಮಸ್ಯೆಗಳಿದ್ದರೆ ಅಹವಾಲು ಸ್ವೀಕಾರ ಮಾಡುವ ಮೂಲಕ ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು. ಕ್ಷೇತ್ರದಾದ್ಯಂತ 1000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಳ್ಳರ ಕೈಚಳಕ
ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ ಇಗ್ಗಲೂರಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಮೂವರು ಮುಖಂಡರುಗಳ ಜೇಬಿಗೆ ಕತ್ತರಿ ಹಾಕಿದ್ದಾರೆ.