ರಾಮನಗರ : ಕಳೆದ ವರ್ಷ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಚನ್ನಪಟ್ಟಣ ಕೋರ್ಟ್ ಪಕ್ಕದಲ್ಲಿ ಸಿಕ್ಕಿರುವ ಅಪರಿಚಿತ ಮಹಿಳೆಯ ಮೃತ ದೇಹದ ಚಹರೆ ಕೊನೆಗೂ ಪತ್ತೆಯಾಗಿದೆ. ಕೊಲೆಯಾದ ಮಹಿಳೆ ಯಾರು ಬಗ್ಗೆ ಸುಳಿವು ದೊರೆತಿದೆ. ಪೊಲೀಸ್ ಇಲಾಖೆಗೆ ಕಠಿಣ ಸವಾಲಾಗಿದ್ದ ಈ ಪ್ರಕರಣವನ್ನ ಭೇದಿಸುವಲ್ಲಿ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ: ಕಳೆದ ವರ್ಷ 2021 ಅಕ್ಟೋಬರ್ ತಿಂಗಳಿನಲ್ಲಿ ಚನ್ನಪಟ್ಟಣ ಹೃದಯ ಭಾಗವಾದ ಕೋರ್ಟ್ ಪಕ್ಕದ ಓವರ್ ಟ್ಯಾಂಕ್ನಲ್ಲಿ ಅಪರಿಚಿತ ಮಹಿಳೆಯ ತುಂಡಾದ ಕಾಲು ಪತ್ತೆಯಾಗಿತ್ತು. ಆ ಮಹಿಳೆ ಯಾರು..? ಟ್ಯಾಂಕ್ನಲ್ಲಿ ಮಹಿಳೆ ಶವ ಹೇಗೆ ಬಂತು..? ಕೊಲೆ ಮಾಡಿ ಮಹಿಳೆಯನ್ನ ಇಲ್ಲಿ ತಂದು ಹಾಕಲಾಗಿದೆಯಾ..? ಈ ಮಹಿಳೆ ಹೆಸರೇನು..? ದೇಹದ ಉಳಿದ ಭಾಗ ಎಲ್ಲಿ..? ಹೀಗೆ ಹತ್ತು ಹಲವು ಪ್ರಶ್ನೆಗಳು ಪೋಲೀಸರಿಗೆ ಸವಾಲಾಗಿದ್ದವು.
ಇದರ ಜೊತೆ ಜೊತೆಗೆ ಮಹಿಳೆಯ ಕಾಲು ಸಿಕ್ಕ ನಾಲ್ಕೈದು ದಿನಗಳ ಮಧ್ಯೆ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅದೇ ಮೃತ ದೇಹದ ಅಂಗಾಂಗಳು ಪತ್ತೆಯಾಗಿದ್ದವು. ನಗರದ ಮಂಗಳವಾರಪೇಟೆಯ 10ನೇ ಕ್ರಾಸ್ ನ ಕುಡಿಯುವ ನೀರಿನ ಪೈಪ್ ನಲ್ಲಿ ಮತ್ತೆ ಮಾಂಸದ ಮುದ್ದೆ, ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ಓದಿ: ವಾಟರ್ ಟ್ಯಾಂಕ್ನಲ್ಲಿ ಮಹಿಳೆ ಶವ ಪತ್ತೆ: ಹೊಸ ಪೈಪ್ಲೈನ್ ಅಳವಡಿಸಲು ಹೆಚ್ಡಿಕೆ ಸೂಚನೆ
ತನಿಖೆ ತೀವ್ರ: ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್ನಲ್ಲಿ ಅಪರಿಚಿತ ಮಹಿಳೆಯ ಶವದ ಕಾಲೊಂದು ಪತ್ತೆಯಾಗಿತ್ತು. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಮಾತ್ರ ಇದ್ದವು. ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ...! ಅಥವಾ ಕೊಲೆ ಮಾಡಿ ದೇಹವನ್ನ ತುಂಡು-ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಶಂಕಿಸಲಾಗಿತ್ತು. ಈ ನಡುವೆ ಈ ಟ್ಯಾಂಕ್ನಿಂದ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಕೆಯನ್ನು ಕೂಡ ಹಲವು ದಿನಗಳಿಂದ ಸ್ಥಗಿತಗೊಳಿಸಲಾಗಿತ್ತು.
ಕಳೆದ ಹಲವು ತಿಂಗಳಿಂದ ಟ್ಯಾಂಕ್ನಿಂದ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಎಲ್ಲೆಲ್ಲಿ ವಾಲ್ ಪೈಪ್ಗಳಿವೆಯೋ ಅಲ್ಲಲ್ಲಿ ಪೈಪುಗಳನ್ನು ಕತ್ತರಿಸಿ ದೇಹ ಒಂದು ವೇಳೆ ನೀರಿನ ಪೈಪ್ನಲ್ಲಿ ಅಂಗಾಂಗಗಳು ಸಿಕ್ಕಿ ಹಾಕಿಕೊಂಡಿರಬಹುದೆಂದು ಹೊರ ತೆಗೆಯುವ ಕಾರ್ಯಾಚರಣೆ ಕೂಡ ನಡೆದಿತ್ತು. ಜೆಸಿಬಿ ಮೂಲಕ ಪೈಪ್ ಶೋಧ ಕಾರ್ಯ ನಡೆದ ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದರು. ನಂತರ ಅಂದು ಸಿಕ್ಕ ಮಾಂಸದ ಮುದ್ದೆಯನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ಎಫ್ಎಸ್ಎಲ್ಗೆ ಕಳುಹಿಸಿಕೊಟ್ಟಿದ್ದರು.
ಮಹಿಳೆ ಚಹರೆ ಪತ್ತೆ: ಈ ಪ್ರಕರಣವನ್ನು ಕೂಡ ಪೊಲೀಸರು ಚಾಲೆಂಜ್ ಆಗಿ ಸ್ವೀಕರಿಸಿದ್ದರು. ಕೋಡಿಹಳ್ಳಿ ಠಾಣೆಯ ಪಿಎಸ್ಐ ಹಾಗೂ ಕನಕಪುರ ಗ್ರಾಮಾಂತರ ಠಾಣೆಯ ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಯಿತು. ಮೊದಲಿಗೆ ಮೃತ ಮಹಿಳೆ ಯಾರು ಎಂಬುದರ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಅಂತೂ ಮಹಿಳೆ ಚಹರೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಮನಗರ ಎಸ್ಪಿ ಸಂತೋಷ ಬಾಬು ತಿಳಿಸಿದ್ದಾರೆ.
ಓದಿ: ಇನ್ನೂ ಸಿಕ್ಕಿಲ್ಲ ಭೂಮಿ ಕಳೆದುಕೊಂಡವರಿಗೆ ಪರಿಹಾರ: ಓವರ್ ಟ್ಯಾಂಕ್ ಏರಿ ರೈತರಿಂದ ಆತ್ಮಹತ್ಯಾ ಯತ್ನ!
ಪ್ರಾಥಮಿಕ ತನಿಖೆ ಆರಂಭಿಸಿದ ಪೊಲೀಸರು ಮೊದಲು ಮಹಿಳೆಯರು ನಾಪತ್ತೆಯಾಗಿರುವ ಪ್ರಕರಣ ಬಗ್ಗೆ ಕಲೆ ಹಾಕಿದರು. ಈ ನಡುವೆ ಜಿಲ್ಲೆಯ ಅನಾಥಾಶ್ರಮದಿಂದ ಮೂವರು ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅನಂತರ ತನಿಖೆ ನಡೆಸಿದ ಅವರಿಗೆ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರು ಮದುವೆಯಾಗಿರುವುದಾಗಿ ತಿಳಿದು ಬಂದಿತ್ತು. ಆದ್ರೆ ಮೂರನೇ ಮಹಿಳೆ ಎಷ್ಟೇ ಹುಡುಕಿದರೂ ಕೂಡ ಪತ್ತೆಯಾಗಿರಲಿಲ್ಲ. ಇದೇ ಜಾಡನ್ನ ಹುಡುಕಿಕೊಂಡು ಹೋದ ಪೊಲೀಸರಿಗೆ ಟ್ಯಾಂಕ್ನಲ್ಲಿ ಸಿಕ್ಕ ವಸ್ತುಗಳು ಹಾಗೂ ತುಂಡಾದ ಕಾಲುಗಳು, ಸೀರೆ, ಚಪ್ಪಲಿ ಎಲ್ಲವೂ ಕೂಡ ನಾಪತ್ತೆಯಾದ ಮಹಿಳೆಗೆ ಸಾಮ್ಯತೆ ಇರುವುದು ಕಂಡು ಬಂದಿತು.
ಸತತ ಆರೇಳು ತಿಂಗಳಿಂದ ತನಿಖೆ ನಡೆಸಿದ ಪೊಲೀಸರಿಗೆ ಈಗ ಮಹಿಳೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕದೆ. ಈಗ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಕೆಗೆ ಯಾರ ಜೊತೆ ಸಂಪರ್ಕ ಇತ್ತು, ಎಲ್ಲಿಂದ ಈಕೆ ಬಂದಿದ್ದಾಳೆ, ಈಕೆ ಅನಾಥಶ್ರಮಕ್ಕೆ ಏಕೆ ಬಂದಳು ಎಂಬಿತ್ಯಾದಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅರೋಪಿಯನ್ನ ಸೆರೆ ಹಿಡಿಯಲಾಗುವುದು ಎಂದು ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.