ರಾಮನಗರ: ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದ ವ್ಯಕ್ತಿಯನ್ನು ಇಂದು ಬೆಳಗ್ಗೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕುಮಾರ್ ಕೊಲೆಗೀಡಾಗಿರುವ ಗ್ರಾಮ ಪಂಚಾಯತ್ ಸದಸ್ಯ. ಬಿಡದಿ ಹೋಬಳಿಯ ಮುತ್ತುರಾಯನಗುಡಿ ಪಾಳ್ಯ ಗ್ರಾಮದ ನಿವಾಸಿ. ಕೆಲವು ತಿಂಗಳ ಹಿಂದೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಿ. ಬನ್ನಿಕುಪ್ಪೆ ಗ್ರಾ.ಪಂ. ಸದಸ್ಯನಾಗಿ ಆಯ್ಕೆಯಾಗಿದ್ದರು. ಗ್ರಾಮದಲ್ಲಿಯೂ ಜನರಿಗೆ ಸಣ್ಣಪುಟ್ಟ ಸಹಾಯ ಮಾಡಿಕೊಂಡಿದ್ದರು.
ಇಂದು ಬೆಳಗ್ಗೆ ಗ್ರಾಮದಿಂದ ಬಿಡದಿ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಹೆಜ್ಜಾಲ ರಸ್ತೆಯಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪಂಚಾಯತ್ ಸದಸ್ಯ ಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೊದಲಿಗೆ ಮುಚ್ಚಿನಿಂದ ಹಲ್ಲೆ ಮಾಡುವ ವೇಳೆ ತಪ್ಪಿಸಿಕೊಳ್ಳಲು ಕುಮಾರ್ ಪ್ರಯತ್ನಿಸಿದ್ದಾರೆ. ಆದ್ರೆ, ಅಟ್ಟಾಡಿಸಿಕೊಂಡು ಬಂದ ಕೊಲೆಗಾರರು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ಕುಮಾರ್ ಪಂಚಾಯತ್ ಕೆಲಸದ ಜತೆಗೆ ಬೆಂಗಳೂರಿನ BWSSB ಕಚೇರಿಯಲ್ಲಿ ಕಾರು ಚಾಲಕನಾಗಿಯೂ ಕೆಲಸ ಮಾಡುತ್ತಿದ್ದರು. ಪಂಚಾಯತ್ ಚುನಾವಣೆಯಲ್ಲಿ ಗೆದ್ದಾಗಿನಿಂದಲೂ ಕುಮಾರ್ಗೆ ಸಾಕಷ್ಟು ಬೆದರಿಕೆ ಇತ್ತಂತೆ. ಅದಕ್ಕಾಗಿಯೇ 20 ದಿನಗಳ ಹಿಂದೆಯೇ ನನಗೆ ಕೊಲೆ ಬೆದರಿಕೆ ಇದೆ, ಪ್ರಾಣ ರಕ್ಷಣೆ ಬೇಕು ಎಂದು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು.
ಕೊಲೆ ಮಾಡುವ ವ್ಯಕ್ತಿಗಳ ಹೆಸರನ್ನೂ ಸಹ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಆದ್ರೆ, ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು ಪತ್ತೆಯಾಗಿರಲಿಲ್ಲ. ಕೊಲೆಯಾದ ಬಳಿಕ ಆರೋಪಿಗಳ ಸಂಪೂರ್ಣ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಜಮೀನು ವಿವಾದ ಹಾಗೂ ಹಳೇ ವೈಷಮ್ಯ ಕೊಲೆಗೆ ಕಾರಣವಾಗಿರಬಹುದು ಎಂಬುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗ್ತಿದೆ.