ರಾಮನಗರ : ಔರಾದ್ಕರ್ ವರದಿ ಜಾರಿಯ ವಿಳಂಬ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅರೆ ಪೊಲೀಸ್ ಸಮವಸ್ತ್ರ ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅರ್ಧ ಪೊಲೀಸ್ ಉಡುಪು ಧರಿಸಿ, ಮೆಣಸಿನಕಾಯಿ ಹಂಚಿ ವಾಟಾಳ್ ನಾಗರಾಜ್ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿನ ಸಮ್ಮಿಶ್ರ ಸರ್ಕಾರ ಔರಾದ್ಕರ್ ವರದಿ ಜಾರಿಗೆ ಸಮ್ಮತಿಸಿತ್ತು. ಆದರೆ ಬಿಜೆಪಿ ಸರ್ಕಾರ ವರದಿ ಜಾರಿಗೆ ವಿಳಂಬಿಸುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪೊಲೀಸರಿಗೆ ನೀಡುತ್ತಿರುವ ಸಂಬಳ ಹಾಗೂ ಭತ್ಯೆಗಳು ತೀರ ಕಡಿಮೆಯಿದೆ. ಆದ್ದರಿಂದ ವರದಿ ಜಾರಿಯಾಗಬೇಕು ಎಂದು ವಾಟಾಳ್ ಸರ್ಕಾರವನ್ನು ಒತ್ತಾಯಿಸಿದರು.
ಇದೇ ವೇಳೆ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಪ್ರಧಾನಿ ಮೋದಿ, ಕೇರಳ ಮತ್ತು ಉತ್ತರ ಪ್ರದೇಶ ರಾಜ್ಯಗಳ ಏಜೆಂಟ್, ಕರ್ನಾಟಕದ ವಿರೋಧಿ ಎಂದು ಕಿಡಿಕಾರಿದರು.
ಕೇಂದ್ರ ಸಚಿವರ ಹರಾಜು ಹಾಕುವ ಪ್ರತಿಭಟನೆ ಎಚ್ಚರಿಕೆ :
ಕೇಂದ್ರದಿಂದ ಅನುದಾನ ತರುವಲ್ಲಿ ವಿಫಲರಾಗಿರುವ ರಾಜ್ಯದ ಕೇಂದ್ರ ಸಚಿವರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಮೈಸೂರಿನಲ್ಲಿ ಕೇಂದ್ರ ಸಚಿವರ ಹರಾಜು ಹಾಕುವ ಪ್ರತಿಭಟನೆ ನಡೆಸುವುದಾಗಿ ಇದೇ ವೇಳೆ ಎಚ್ಚರಿಕೆ ನೀಡಿದರು.
ವರದಿ ಜಾರಿಯಿಂದ ಪೊಲೀಸರ ಮೂಲ ವೇತನ ಪರಿಷ್ಕರಣೆಯಾಗಲಿದೆ.