ರಾಮನಗರ: ಜಾರಿ ನಿರ್ದೆಶನಾಲಯದ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಸ್ಟಡಿ ಇಂದು ಮುಕ್ತಾಯವಾಗುತ್ತಿರುವ ಹಿನ್ನೆಲೆ ಕನಕಪುರದಲ್ಲಿ ಪೊಲೀಸರ ಕಣ್ಗಾವಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸ್ ಇಲಾಖೆ, ಬಿಗಿ ಬಂದೋಬಸ್ತ್ಗೆ ಸಜ್ಜಾಗಿದೆ.
ಡಿಕೆಶಿಯವರನ್ನ ಮತ್ತೆ ಇಡಿ ಕಸ್ಟಡಿಗೆ ಪಡೆಯಬಹುದು ಎಂಬ ಶಂಕೆ ಹೆಚ್ಚಾಗಿದೆ. ಡಿ.ಕೆ.ಶಿವಕುಮಾರ್ಗೆ ಜಾಮೀನು ನೀಡಿದರೆ ತನಿಖೆಗೆ ತೊಂದರೆಯಾಗುವುದಲ್ಲದೆ, ಆರೋಪಿ ಹೊರಗಿದ್ದರೆ ಸಾಕ್ಷಿಗಳನ್ನು ಬೆದರಿಸಿ ನಾಶ ಪಡಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಇಡಿ ಅಭಿಪ್ರಾಯಪಟ್ಟಿದ್ದು, ಕೋರ್ಟ್ಗೆ ಜಾಮೀನು ನೀಡದಂತೆ ಮನವಿ ಮಾಡಿದೆ.
ಡಿಕೆಶಿ ಅಭಿಮಾನಿಗಳು ರಸ್ತೆಗಿಳಿದು ಟೈರ್ಗೆ ಬೆಂಕಿ ಹಚ್ಚಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ್ ಮಾಡಿರುವ ಜಿಲ್ಲಾ ಎಸ್ಪಿ ಅನೂಪ್ ಶೆಟ್ಟಿ, ಮುನ್ನೆಚ್ಚರಿಕೆ ಕ್ರಮವಾಗಿ ಓರ್ವ ಎಎಸ್ಪಿ ನೇತೃತ್ವದಲ್ಲಿ ಡಿವೈಎಸ್ಪಿ, ಸಿಪಿಐ, ಪಿಎಸ್ಐ, ಎಎಸ್ಐ, 4 ಡಿಆರ್ ತುಕಡಿ, 4 ಕೆಎಸ್ಆರ್ಪಿ ತುಕಡಿ ನಿಯೋಜನೆಗೊಳಿಸಿ ಕಟ್ಟೆಚ್ಚರ ವಹಿಸಿದ್ದಾರೆ.