ರಾಮನಗರ: ಯುಜಿಡಿ ಕೆಲಸ ಮಾಡುತ್ತಿದ್ದ ಹೊರ ಗುತ್ತಿಗೆ ಮೂವರು ಕಾರ್ಮಿಕರು ಮ್ಯಾನ್ ಹೋಲ್ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ಜರುಗಿದೆ.
ನಗರಸಭಾ ವ್ಯಾಪ್ತಿಯ ಹೊಸ ನೇತಾಜಿ ಪಾಪ್ಯುಲರ್ ಶಾಲೆಯ ಹಿಂಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಂಜುನಾಥ್, ಮಂಜುನಾಥ್ ಹಾಗೂ ರಾಜೇಶ್ ಎಂಬುವರು ಮೃತಪಟ್ಟಿದ್ದು, ಇವರು ಬೆಂಗಳೂರಿನ ಕಮಲಾನಗರ ನಿವಾಸಿಗಳೆಂದು ತಿಳಿದು ಬಂದಿದೆ.
ಯುಜಿಡಿ ಕೆಲಸಕ್ಕೆ ಗುತ್ತಿಗೆ ಆಧಾರದ ಮೇಲೆ ಈ ಯುವಕರನ್ನ ಬೆಂಗಳೂರಿನಿಂದ ಕರೆಸಲಾಗಿತ್ತು. ಯುಜಿಡಿ ಕೆಲಸ ಮಾಡುತ್ತಿದ್ದ ವೇಳೆ ಮೂವರಿಗೂ ಉಸಿರುಗಟ್ಟಿ ಮ್ಯಾನ್ ಹೋಲ್ ಒಳಗಡೆಯೇ ಬಿದ್ದಿದ್ದಾರೆ. ಕೂಡಲೇ ಮೂವರನ್ನ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೂ ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಗುತ್ತಿಗೆದಾರ ಹರೀಶ್ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಯಾವುದೇ ಸುರಕ್ಷತಾ ಸಲಕರಣೆ ನೀಡದೆ ನೇರವಾಗಿ ಮ್ಯಾನ್ ಹೋಲ್ನಲ್ಲಿ ಈ ಯುವಕರನ್ನ ಇಳಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.