ರಾಮನಗರ: ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನ, ಅಭಿವೃದ್ಧಿ ಕುಂಠಿತ ಹಾಗೂ ರೇಷ್ಮೆ ಮಾರುಕಟ್ಟೆ ಸ್ಥಳಾಂತರ ಖಂಡಿಸಿ ಕರೆ ನೀಡಿದ್ದ ರಾಮನಗರ ಬಂದ್ ಬಹುತೇಕ ಯಶಸ್ವಿಗೊಂಡಿದೆ.
ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ. ಶೇಷಾದ್ರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ, ರಾಮನಗರ ನಗರಸಭೆ ಅಧಿಕಾರಿಗಳ ವಿರುದ್ಧ ವಾಗ್ಧಾಳಿ ನಡೆಸಿದರು. ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರ ಜೊತೆಗೂಡಿ ಹೋರಾಟ ನಡೆಸಲಾಯಿತು.
ರಾಮನಗರ ನಗರಸಭೆ ಅವ್ಯವಸ್ಥೆಗಳ ಆಗರವಾಗಿದೆ. ಯಾವುದೇ ಸರ್ಕಾರಿ ಕೆಲಸಗಳು ಆಗುತ್ತಿಲ್ಲ. ಇ-ಖಾತಾ ಮಾಡಿಸಲು ತಿಂಗಳು ಗಟ್ಟಲೆ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳನ್ನು ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಇದಲ್ಲದೆ ವಾರಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತದೆ. ಅದರಲ್ಲಿ ಕೆಲ ಬಡಾವಣೆಗೆ ಕಲುಷಿತ ನೀರು ಬರುತ್ತಿದೆ ಎಂದು ಆರೋಪಿಸಿದರು. ರಾಮನಗರದ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ವರ್ಗಾವಣೆ ಮಾಡುವ ಹುನ್ನಾರ ಮಾಡಲಾಗುತ್ತಿರುವುದು ಖಂಡನಾರ್ಹ. ಯಾವುದೇ ಕಾರಣಕ್ಕೂ ಈ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಹೋಗಲು ಬಿಡುವುದಿಲ್ಲ. ಈ ಹೋರಾಟ ಕೇವಲ ಸಾಂಕೇತಿಕ, ಮುಂದೆ ಇನ್ನಷ್ಟು ಉಗ್ರರೂಪ ತಾಳಲಿದೆ. ಈಗಲೇ ಸಂಬಂಧ ಪಟ್ಟ ಇಲಾಖೆ ಕ್ರಮ ಜರುಗಿಸಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: ದೇವಿಯ ಕೊಂಡಕ್ಕೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ!