ರಾಮನಗರ: ರಾಮನಗರ ಹಾಗೂ ಚನ್ನಪಟ್ಟಣ ಪ್ರಾಧಿಕಾರದ ಶುಭ ಸುದ್ದಿ ನೀಡಿದ್ದು, ರೈತರೇ ನೇರವಾಗಿ ತಮ್ಮ ಜಮೀನನ್ನ ಪ್ರಾಧಿಕಾರಕ್ಕೆ ನೀಡಬಹುದು ಎಂದು ಹೇಳಿದೆ. ಪ್ರಾಧಿಕಾರದ ವತಿಯಿಂದ 50-50 ಅನುಪಾತದಲ್ಲಿ ಸೈಟ್ಗಳನ್ನ ಹಂಚಲಾಗುತ್ತದೆ. ಇದರ ಜೊತೆಗೆ ಕಡಿಮೆ ದರದಲ್ಲಿ ಮನೆ ನಿರ್ಮಾಣಕ್ಕೆ ಪ್ರಾಧಿಕಾರ ಕಟ್ಟಲು ಸಿದ್ಧತೆ ನಡೆಸುತ್ತಿದೆ.
ಅಭಿವೃದ್ಧಿಯತ್ತ ರಾಮನಗರ - ಚನ್ನಪಟ್ಟಣ ಪ್ರಾಧಿಕಾರ: ರಾಮನಗರ ಚನ್ನಪಟ್ಟಣ ಪ್ರಾಧಿಕಾರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಪ್ರಸ್ತುತ ಈ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿರುವುದು ಮುರುಳೀಧರ್. ರಾಮನಗರ ಜಿಲ್ಲೆ ಹಾರೋಹಳ್ಳಿಯರವರಾದ ಇವರು ಅಧ್ಯಕ್ಷರಾಗುತ್ತಿದ್ದಂತೆ ಹೊಸ ಹೊಸ ಯೋಜನೆಗಳನ್ನ ರೂಪಿಸುತ್ತಿದ್ದಾರೆ. ಒಂದೆಡೆ ರಾಮನಗರ ಜೀವನದಿಯಾಗಿದ್ದ ಅರ್ಕಾವತಿ ನದಿ ಪುನಶ್ಚೇತನಕ್ಕೆ ಮೊದಲ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.
ಈಗ ಪ್ರಾಧಿಕಾರ ಹಾಗೂ ರೈತರೊಂದಿಗೆ ನೇರ ಒಪ್ಪಂದ ಮಾಡಿ ನಿವೇಶನ ಹಂಚಲು ಮುಂದಾಗಿದ್ದಾರೆ. ಅಂದರೆ ರೈತರೇ ನೇರವಾಗಿ ನಿವೇಶನ ಮಾಡಲು ತಮ್ಮ ಜಮೀನನ್ನ ಪ್ರಾಧಿಕಾರಕ್ಕೆ ನೀಡುವುದು. ರೈತರಿಂದ ಪಡೆದ ಜಮೀನಲ್ಲಿ ಪ್ರಾಧಿಕಾರದಿಂದ ಲೇಔಟ್ ನಿರ್ಮಾಣ ಮಾಡಲಾಗುವುದು. ಇದರಲ್ಲಿ ಜಮೀನಿನ ಮಾಲೀಕರು ಹಾಗೂ ಪ್ರಾಧಿಕಾರಕ್ಕೆಶೇ.50-50 ಅನುಪಾತದಲ್ಲಿ ನಿವೇಶನ ಕೊಡಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ವು ಅನುಕೂಲವಾದ್ರೆ, ಮತ್ತೊಂದೆಡೆ ನಿವೇಶನ ರಹಿತ ಸಾರ್ವಜನಿಕರಿಗೆ ಪ್ರಾಧಿಕಾರದಿಂದ ನಿವೇಶನ ನೀಡಲು ಅನುಕೂಲವಾಗಲಿದೆ.
ಈಗಾಗಲೇ ಪ್ರಾಧಿಕಾರದ ವತಿಯಿಂದ ನಿವೇಶನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೈಟ್ ಮಾಡಲು ರೈತರೊಂದಿಗೆ ಮಾತುಕತೆ ಕೂಡ ಮಾಡಲಾಗಿದೆ. ಕೆಲ ರೈತರು ತಮ್ಮ ಜಮೀನು ನೀಡಲು ಮುಂದೆ ಬಂದಿದ್ದಾರೆ. ಮತ್ತೆ ಕೆಲವು ರೈತರೊಂದಿಗೆ ಸಮಾಲೋಚನೆ ನಡೆಸಿ ನಿವೇಶನ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತೆ ಎಂಬುದನ್ನ ರೈತರಿಗೆ ಮನವರಿಕೆ ಮಾಡಲಾಗುವುದು. ಇದರ ಜೊತೆಗೆ ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಹಂಚಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳುತ್ತಾರೆ.
ಸದ್ಯ ರಾಮನಗರ ಪ್ರಾಧಿಕಾರ ದಿಟ್ಟ ಹೆಜ್ಜೆ ಇಟ್ಟಿದೆ. ರೈತರು ಮುಂದೆ ಬಂದು ಜಮೀನು ನೀಡಿದ್ರೆ, ನಿವೇಶನ ರಹಿತರಿಗೆ ನಿವೇಶನ ದೊರೆಯುತ್ತೆ. ಇತ್ತ ರೈತರಿಗೂ ಅನುಕೂಲವಾಗುತ್ತೆ. ಅದಷ್ಟು ಬೇಗ ಯೋಜನೆ ರೂಪುಗೊಂಡರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.