ರಾಮನಗರ: ಜಿಲ್ಲೆಯ ಡಿ.ಎಂ. ಪ್ರೀತಿ ಎಂಬ ಹೆಸರಿನ ಮಹಿಳೆ ಅಪರೂಪದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ನಾಗರೀಕ ಸಮಾಜಕ್ಕೆ ಘನತೆ ತಂದಿದ್ದಾರೆ. ಪ್ರೀತಿ ಅವರು ರಾಮನಗರದಲ್ಲಿ ಸಾವಿತ್ರಿಬಾಯಿ ಫುಲೆ ಟ್ರಸ್ಟ್ ಸ್ಥಾಪಿಸುವುದರ ಜೊತೆಗೆ, ನಿರಾಶ್ರಿತ ವೃದ್ಧರು ಹಾಗೂ ಅನಾಥರಿಗಾಗಿ ಅಮ್ಮನ ಮಡಿಲು ಅನಾಥಾಶ್ರಮ ತೆರೆಯುವ ಮೂಲಕ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿಸಿದ್ದಾರೆ.
ಇದಲ್ಲದೇ ಅನಾಥ ಶವಗಳ ಸಂಸ್ಕಾರ ಕಾರ್ಯವನ್ನು ಮಾಡುತ್ತಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷವಾಗಿ ಕ್ರೈಮ್ ಪ್ರಕರಣಗಳಲ್ಲಿ ಪರಿಚಯ ಸಿಗದ ಅನಾಥ ಶವಗಳ ಸಂಸ್ಕಾರ ನಡೆಸುತ್ತಿದ್ದಾರೆ. ರೈಲಿಗೆ ಸಿಲುಕಿ ಛಿದ್ರವಾದ ದೇಹಗಳಿರಲಿ, ನೀರಲ್ಲಿ ಮುಳುಗಿ ಕೊಳೆತು ನಾರುತ್ತಿರುವ ಶವವಾಗಲಿ ಯಾವುದನ್ನೂ ಲೆಕ್ಕಿಸದೇ ಸೇವೆಯನ್ನು ಮಾಡುತ್ತಿದ್ದಾರೆ.
ಹಲವು ಸಂಘಟನೆಗಳಲ್ಲಿ ಸೇವೆ: ಪ್ರಜಾ ಪರಿವರ್ತನಾ ವೇದಿಕೆಯ ರಾಮನಗರ ಜಿಲ್ಲಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಮನಗರ ತಾಲೂಕು ಘಟಕದ ಅಧ್ಯಕ್ಷರಾಗಿ, ರಾಮನಗರ ತಾಲೂಕು ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿ ಹೀಗೆ ಹಲವಾರು ಸಂಘ- ಸಂಸ್ಥೆಗಳಲ್ಲಿ ಮಹಿಳಾ ಸಬಲೀಕರಣದ ವಿಚಾರವಾಗಿ ಸಾಕಷ್ಟು ಸೇವೆಯನ್ನು ಪ್ರೀತಿ ಅವರು ಸಲ್ಲಿಸಿದ್ದಾರೆ.
ಮೂರು ತಿಂಗಳಲ್ಲಿ ಎಂಟು ಶವ ಸಂಸ್ಕಾರ: ಕಳೆದ ಮೂರು ತಿಂಗಳಲ್ಲಿ ಎಂಟು ಅನಾಥ ಶವಗಳ ಸಂಸ್ಕಾರ ಮಾಡಿದ್ದಾರೆ. ಪ್ರೀತಿ ಅವರಿಗೆ ಮುಖ್ಯವಾಗಿ ಪೊಲೀಸ್ ಇಲಾಖೆಯವರ ಸಹಕಾರದಿಂದಾಗಿ ಅನಾಥ ಶವಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಉಳಿದಂತೆ, ಆಟೋ, ಆ್ಯಂಬುಲೆನ್ಸ್ ಚಾಲಕರು ಹಾಗೂ ಪ್ರೀತಿ ಅವರ ಸೇವೆಯ ಬಗ್ಗೆ ಗೊತ್ತಿರುವ ಜನ ಸಾಮಾನ್ಯರಿಂದಲೂ ಅವರಿಗೆ ಮಾಹಿತಿ ದೊರೆಯುತ್ತದೆ.
ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುವ, ಸಮಾಜ ಸೇವಕಿ, ಆಪ್ತ ಗೆಳತಿ ಸೌಮ್ಯ, ಸ್ವತಃ ಪ್ರಗತಿಪರ ಕೃಷಿಕರೂ ಆಗಿರುವ ಕರ್ನಾಟಕ ರೈತಸಂಘ-ಹಸಿರುಸೇನೆ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಸೇರಿದಂತೆ ಅನೇಕ ಸಮಾನ ಮನಸ್ಕರು ಇವರ ಬೆಂಬಲಕ್ಕೆ ನಿಂತಿದ್ದಾರೆ.
ಅನಾಥ ಶವಗಳ ಸಂಸ್ಕಾರ ಹಾಗೂ ಅಮ್ಮನ ಮಡಿಲು ಅನಾಥಶ್ರಮದ ಸೇವೆ ಜೊತೆಗೆ, ಕೌಟುಂಬಿಕ ಆಪ್ತ ಸಮಾಲೋಚನೆ, ಸತಿ-ಪತಿ, ಅತ್ತೆ-ಸೊಸೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಸಮಸ್ಯೆಗಳ ಬಗ್ಗೆಯೂ ಆಪ್ತ ಸಮಾಲೋಚನೆ ನಡೆಸುತ್ತ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು ಕಾಲೇಜಲ್ಲಿ ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಶಿಸ್ತು ಕ್ರಮದ ನೋಟಿಸ್ ಜಾರಿ