ರಾಮನಗರ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಾರಂಭವಾಗಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ರೈತರನ್ನು ನೋಂದಣಿ ಮಾಡಿ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ ಕಾಯ೯ಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ನಾರಾಯಣ ಗೌಡ ತಿಳಿಸಿದರು.
![raising-awareness-among-farmers-minister-narayana-gowda](https://etvbharatimages.akamaized.net/etvbharat/prod-images/r-kn-rmn-02-30062021-meeting-minister-ka10051_30062021174947_3006f_1625055587_81.jpg)
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿ, ಬೆಳೆ ವಿಮೆ ನೋಂದಣಿಯಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಿ ಎಂದ ಅವರು, ವಿಮಾ ಕಂಪನಿಗಳು ರೈತರಿಗೆ ಪಾವತಿ ಮಾಡಿರುವ ಹಣ ಹಾಗೂ ಬಾಕಿ ಉಳಿಸಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಪೌಂಡ್ ನಿರ್ಮಾಣವಾಗಬೇಕು. ಸೋಲಾರ್ ದೀಪಗಳ ಅಳವಡಿಕೆ, ಕ್ರೀಡಾಪಟುಗಳಿಗೆ ಬಟ್ಟೆ ಬದಲಾಯಿಸಲು ಕೊಠಡಿ ಸೇರಿದಂತೆ ವಿವಿಧ ಕೆಲಸಗಳು ನಡೆಯಬೇಕಿದ್ದು, ಕೋವಿಡ್ ಹಿನ್ನಲೆಯಲ್ಲಿ ವಿವಿಧ ಯುವಜನ ಕಾರ್ಯಕ್ರಮಗಳು ಈ ಬಾರಿ ನಡೆದಿರುವುದಿಲ್ಲ ಎಂದರು.
ವೆಚ್ಚವಾಗದ 20 ಕೋಟಿ ರೂ. ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ 20 ಕೋಟಿ ಹಣ ವೆಚ್ಚವಾಗಿರುವುದಿಲ್ಲ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಇವುಗಳನ್ನು ಕೇಂದ್ರ ಹಾಗೂ ಉನ್ನತ ಮಟ್ಟದಲ್ಲಿ ಪರಿಶೀಲಿಸಿದಾಗ ಅನುದಾನ ವೆಚ್ಚವಾಗದೇ ಇರುವುದು ಕಂಡು ಬಂದರೆ ಆರ್ಥಿಕ ಇಲಾಖೆ ಹಾಗೂ ಕೇಂದ್ರ ಸರ್ಕಾರದಿಂದ ಮುಂದಿನ ಅನುದಾನ ಬಿಡುಗಡೆಯಾಗುವುದಿಲ್ಲ. ಸದರಿ ಯೋಜನೆಯ ಹಣವನ್ನು ಕೋವಿಡ್ ಕೆಲಸಗಳಿಗೂ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ: ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆಯಡಿ 2019-20 ನೇ ಸಾಲಿನಲ್ಲಿ 100 ಕಾಮಗಾರಿಗಳನ್ನು ಕೈಗೊಂಡಿದ್ದು, 17 ಪೂರ್ಣವಾಗಿರುತ್ತದೆ. 13 ಪ್ರಗತಿಯಲ್ಲಿರುತ್ತದೆ. 70 ಆಡಳಿತಾತ್ಮಕ ಅನುಮೋದನೆ ಹಾಗೂ ಇನ್ನಿತರ ಕಾರಣಗಳಿಂದ ಪ್ರಾರಂಭವಾಗಿರುವುದಿಲ್ಲ. 70 ಕಾಮಗಾರಿಗಳು ಪ್ರಾರಂಭವಾಗಿದ್ದಲ್ಲಿ ಈ ಬಗ್ಗೆ ಸೂಕ್ತ ಕಾರಣ ನೀಡುವಂತೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ಅಭಿವೃದ್ಧಿ ಯೋಜನೆಯಡಿ 2020-21 ನೇ ಸಾಲಿನಲ್ಲಿ 37.52 ಕೋಟಿ ರೂ ಅನುದಾನ ನಿಗಧಿಯಾಗಿದ್ದು, 28.57 ಕೋಟಿ ರೂ ಬಿಡುಗಡೆಯಾಗಿ 26.20 ಕೋಟಿ ರೂ ವೆಚ್ಚವಾಗಿ ಶೇ 96 ಸಾಧನೆಯಾಗಿರುತ್ತದೆ ಎಂದರು.
ಜಿಲ್ಲಾ ಕ್ರೀಡಾಂಗಣಕ್ಕೆ ಬೇಟಿ ನೀಡಿದ ಕ್ರೀಡಾ ಸಚಿವರು: ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕ್ರೀಡಾಂಗಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕ್ರೀಡಾಂಗಣದಲ್ಲಿ ಸಿಟ್ಟಿಂಗ್ ಗ್ಯಾಲರಿ ನಿರ್ಮಾಣವಾಗಬೇಕು. ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಿಕೊಡುವಂತೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ಓದಿ: 130ಕ್ಕೂ ಹೆಚ್ಚು ಸೀಟ್ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಸವಾಲು ನನ್ನ ಮುಂದಿದೆ: BSY