ರಾಮನಗರ: ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯ ಪರಿಣಾಮ ನೀರು ರಾಮನಗರದ ಮಿನಿ ವಿಧಾನಸೌಧಕ್ಕೆ ನುಗ್ಗಿ ಹಲವು ಅವಾಂತರ ಸೃಷ್ಟಿಸಿದೆ.
ಮಿನಿ ವಿಧಾನಸೌಧದ ಸೆಲ್ಲರ್ ಕೆಳಗೆ ಮೊನಕಾಲುದ್ದ ನೀರು ಬಂದಿದ್ದು, ಸಾರ್ವಜನಿಕರು ನಡೆದಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಮಿನಿ ವಿಧಾನಸೌಧಕ್ಕೆ ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಸರ್ಕಾರಿ ಸವಲತ್ತು ಪಡೆಯಲು ಆಗಮಿಸುತ್ತಾರೆ. ಕಳೆದ ಎರಡು ಮೂರು ದಿನಗಳಿಂದ ರಾಮನಗರದಲ್ಲಿ ಸುರಿಯುತ್ತಿರುವ ಮಳೆಗೆ ಮಿನಿ ವಿಧಾನಸೌಧದ ಒಳಗೆ ನೀರು ನುಗ್ಗಿರುವುದು ಸಾರ್ವಜನಿಕರಿಗೆ ತೊಂದರೆಯಾಗಿದೆ.
ಪ್ರತಿ ಭಾರಿ ಮಳೆ ಬಂದಾಗಲೂ ಕೂಡ ಮಿನಿ ವಿಧಾನಸೌಧದ ಸೆಲ್ಲರ್ ಕೆಳಗೆ ನೀರು ನಿಂತುಕೊಳ್ಳುತ್ತದೆ. ಎಷ್ಟು ಬಾರಿ ಹೇಳಿದ್ರು ಕೂಡ ತಾಲೂಕಾಡಳಿಕ ಕ್ರಮ ಕೈಗೊಳ್ಳುವುದಿಲ್ಲ. ರಾಜಕಾರಣಿಗಳು ಚುನಾವಣೆಗೆ ಬಂದಾಗ ಮಾತ್ರ ಮನೆ ಬಾಗಿಲಿಗೆ ಬಂದು ನಾಜೂಕಾಗಿ ಹೇಳ್ತಾರೆ. ನಂತರ ಕೇವಲ ಖುರ್ಚಿಗೆ ಸೀಮಿತವಾಗಿಬಿಡ್ತಾರೆ. ಸಾರ್ವಜನಿಕರ ಸಮಸ್ಯೆಗಳತ್ತ ಗಮನ ಹರಿಸುವುದೇ ಇಲ್ಲ ಎಂದು ರಾಜಕಾರಣಗಳ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಧಾರ್ ಕಾರ್ಡ್ನಲ್ಲಿ ಕೆಲವು ಬದಲಾವಣೆ ಮಾಡಿಸಬೇಕಿದೆ. ಒಂದು ತಿಂಗಳಾಯ್ತು ಸುತ್ತಿ ಸುತ್ತಿ ಸಾಕಾಗ್ತಿದೆ, ಪರಿಹಾರ ಸಿಗ್ತಿಲ್ಲ. ಯಾರಿಗೆ ದೂರು ನೀಡಿದರೂ ಪ್ರಯೋಜನವಿಲ್ಲ ಎಂದು ಭಾಗ್ಯಮ್ಮ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.