ರಾಮನಗರ:ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ಮೇ 13ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲರ ಚಿತ್ತ ಮತ ಎಣಿಕೆ ಕಡೆ ಇದ್ದು, ರಾಮನಗರದಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಭದ್ರತೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಆಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಂದಾಯ ಸಚಿವ ಆರ್ ಆಶೋಕ್, ನಿಖಿಲ್ ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಘಟಾನುಘಟಿ ಆಭ್ಯರ್ಥಿಗಳ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದಿರುವ ರೇಷ್ಮೆನಾಡು ರಾಮನಗರ ಜಿಲ್ಲೆಯ ಚುನಾವಣಾ ಫಲಿತಾಂಶದತ್ತ ಚಿತ್ತ ನೆಟ್ಟಿದೆ.
ಈಗಾಗಲೇ ಜಿಲ್ಲೆಯ ನಾಲ್ಕು ತಾಲೂಕಿನ ಆಭ್ಯರ್ಥಿಗಳ ಹಣೆಬರಹವನ್ನು ಮೇ 10ರಂದು ಮತದಾರ ಪ್ರಭು ತಮ್ಮ ಮತದಾನದ ಮೂಲಕ ಇವಿಎಂ ಮತಯಂತ್ರದಲ್ಲಿ ಭದ್ರಪಡಿಸಿದ್ದಾನೆ. ಅಭ್ಯರ್ಥಿಗಳ ಹಣೆಬರಹ ಹೊತ್ತ ಇವಿಎಂ ಮತ ಯಂತ್ರಗಳು ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸರ್ಪಗಾವಲಿನಲ್ಲಿ ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿದೆ.
ರಾಮನಗರದ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಹಳೇ ಬೆಂಗಳೂರು ಮೈಸೂರು ಹೆದ್ದಾರಿಗೆ ಪಕ್ಕದ ಜಾನಪದಲೋಕದ ಬಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ಸೇರಿದಂತೆ ಮತ ಎಣಿಕೆ ನಡೆಯುವ ಕಟ್ಟಡಕ್ಕೆ ಬಿಗಿ ಭದ್ರತೆ ಮಾಡಲಾಗಿದೆ. ಭದ್ರತೆಗಾಗಿ 2 ಪ್ಯಾರಾ ಮಿಲಿಟರಿ ಪೋರ್ಸ್, 2 ಕೆಎಸ್ಆರ್ಪಿ ತುಕಡಿ, ಒಬ್ಬರು ಡಿವೈಎಸ್‌ಪಿ, ಒಬ್ಬರು ಇನ್ಸ್‌ಪೆಕ್ಟರ್, 4 ಜನ ಸಬ್ ಇನ್ಸ್‌ಪೆಕ್ಟರ್ ಹಾಗೂ 30 ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ಮೇ 10ರಂದು ನಡೆದ ಮತದಾನದಲ್ಲಿ ಜಿಲ್ಲೆಯ ಒಟ್ಟು 9,04,702 ಮತದಾರಲ್ಲಿ ಶೇಕಡಾ 85.04 ಅಂದರೆ 7,69,338 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ನಾಳೆ ಮೇ 13ರಂದು ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಮತ ಕ್ಷೇತ್ರದ ಒಂದು ಕೊಠಡಿಗೆ 7 ಟೇಬಲ್‍ನಂತೆ ಒಟ್ಟು 14 ಮತ ಎಣಿಕೆ ಟೇಬಲ್‍ಗಳು ಹಾಗೂ ಅಂಚೆ ಮತದಾನಕ್ಕೆ 1 ಕೊಠಡಿಯಲ್ಲಿ 3 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಸಂದರ್ಭದಲ್ಲಿ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಸಹಾಯಕರು, ಒಬ್ಬರು ಮೇಲ್ವಿಚಾರಕರು ಹಾಗೂ 400 ಸಿಬ್ಬಂದಿಗಳನ್ನು ಮತ ಎಣಿಕೆಗೆ ಕಾರ್ಯಕ್ಕೆ ಜಿಲ್ಲಾಡಳಿತ ನಿಯೋಜನೆ ಮಾಡಿದೆ. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುವ ಮತ ಎಣಿಕೆ ಕಾರ್ಯ ಬಹುತೇಕ ಸುಮಾರು 11 ಗಂಟೆಯ ಸಮಯಕ್ಕೆ ಅಭ್ಯರ್ಥಿಗಳ ಸೋಲು ಗೆಲುವಿನ ಸಂಪೂರ್ಣ ಚಿತ್ರಣ ಸಿಗಲಿದೆ.
ರಾಮನಗರ ಜಿಲ್ಲೆಗಳು ಫಲಿತಾಂಶ ಬಗ್ಗೆ ಪ್ರತಿಕ್ರಿಯೆ: ನಾಳೆ ಮತ ಎಣಿಕೆ ಹಿನ್ನೆಲೆ ರಾಮನಗರ ಜಿಲ್ಲಾ ಚುನಾವಣಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್ ಮಾತನಾಡಿ, ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯುತ್ತದೆ. ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನಡೆಯತ್ತದೆ. ನಂತರ ಇವಿಎಂ ಗಳ ಏಣಿಕೆ ಕಾರ್ಯ ಮಾಡಲಾಗುವುದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಒಂದೇ ಕಡೆ ನಡೆಯುತ್ತದೆ.
ರಾಮನಗರದ ಹೊರವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಒಂದು ಕ್ಷೇತ್ರಕ್ಕೆ 18-25 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿ ಕ್ಷೇತ್ರಕ್ಕೆ ಮೂರು ರೂಂಗಳನ್ನು ಬಳಸಲಾಗಿದೆ. ಒಂದು ರೂಂನಲ್ಲಿ 18 ಟೇಬಲ್ ಗಳನ್ನು ಇಡಲಾಗಿದೆ. ಪ್ರತಿಯೊಂದು ಟೇಬಲ್ ಗೂ ಮೈಕ್ರೋ ಅಬ್ಸರ್ ವರ್, ಸೂಪರ್ ವೈಸರ್, ಬೂತ್ ಏಜೆಂಟ್ ಇರುತ್ತಾರೆ. ಮಧ್ಯಾಹ್ನ 1 ಗಂಟೆ ಒಳಗಡೆ ಸ್ಪಷ್ಟ ಫಲಿತಾಂಶ ಸಿಗಲಿದೆ. ಮೂರು ಹಂತದಲ್ಲಿ ಸ್ಟ್ರಾಂಗ್ ರೂಂಗೆ ಭದ್ರತೆ ಒದಗಿಸಲಾಗಿದೆ.
ಈಗಾಗಲೇ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ ಭದ್ರತೆಗಾಗಿ ಬಿಎಸ್ ಎಫ್, ಕೆಎಸ್ ಆರ್ ಪಿ, ರಾಜ್ಯ ಪೋಲಿಸರನ್ನು ನಿಯೋಜಿಸಲಾಗಿದೆ. ಕೌಂಟಿಂಗ್ ಹಾಲ್ ನಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಕೌಂಟಿಂಗ್ ನಡೆಯುವ ಕಾಲೇಜು ಬಳಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.
ಇದನ್ನೂಓದಿ:ಎಡಗೈ ಊತ, ನೋವು; ತಪಾಸಣೆಗೆ ಒಳಗಾದ ಸಿದ್ದರಾಮಯ್ಯ: ಡಿಕೆಶಿ ಆರೋಗ್ಯ ಚೇತರಿಕೆ