ರಾಮನಗರ : ಕೊರೊನಾ ಸೋಂಕಿನ ವಿರುದ್ದ ಹೋರಾಟದಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸರಕಾರಿ ಅಧಿಕಾರಿಗಳಿಗೆ ವೇತನದ ಜೊತೆಗೆ ಹೆಚ್ಚುವರಿ ಭತ್ಯೆ ಕೊಡಬೇಕು ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರ ಬಳಿ ಮಾಹಿತಿ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸರಿಗೆ ವೇತನ ಬಿಡುಗಡೆಯಾಗಿಲ್ಲ ಎಂಬ ದೂರುಗಳು ಕೇಳಿ ಬಂದಿದೆ, ರಾಜ್ಯ ಸರ್ಕಾರ ಇಂತಹವುಗಳಿಗೆ ಆಸ್ಪದ ಕೊಡಬಾರದು, ತಕ್ಷಣ ಎಲ್ಲರಿಗೂ ವೇತನ ವಿತರಣೆಯಾಗಬೇಕು ಎಂದು ಒತ್ತಾಯಿಸಿದರು.
ಕೊರೊನಾ ವಿರುದ್ದ ಹೋರಾಡುತ್ತಿರುವ ಎಲ್ಲಾ ಸಿಬ್ಬಂದಿ ವರ್ಗಕ್ಕೂ ವಿಶೇಷ ಭತ್ಯೆ ಕೊಡಬೇಕು. ಕೊರೊನಾ ವಿರುದ್ದ ಸಮಗ್ರ ಹೋರಾಟಕ್ಕೆ ಅನುವಾಗುವಂತೆ ಸಂಸದರು, ಶಾಸಕರು, ಜಿಪಂ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಸಂಸದರ ಅಧ್ಯಕ್ಷತೆಯಲ್ಲಿ ಸಮಿತಿಗಳು ರಚನೆಯಾಗಲಿ, ಆಯಾ ಲೋಕಸಭಾ ಕ್ಷೇತ್ರವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಸದಸ್ಯರು ಮತ್ತು ಜಿಲ್ಲಾ ಪಂಚಾಯಿತಿಗಳ ಸದಸ್ಯರು ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿಯ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಸರ್ಕಾರಿ ಅಧಿಕಾರಿಗಳು ಅನುಷ್ಠಾನಕ್ಕೆ ತರಬೇಕು ಎಂದರು.
ಸಮಿತಿ ಪದಾಧಿಕಾರಿಗಳ ಮತ್ತು ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕು . ಕೊರೊನಾ ವೈರಸ್ ಸೋಂಕು ವಿಚಾರದಲ್ಲಿ ಎಲ್ಲಾ ಪಕ್ಷಗಳು ಪಕ್ಷಬೇದ ಮರೆತು ಹೋರಾಟ ನಡೆಸಬೇಕಾಗಿದೆ. ಈ ಹೋರಾಟಕ್ಕೆ ಒಂದೇ ಧ್ವನಿ ಇರಬೇಕು ಎಂದು ಮನವಿ ಮಾಡಿದ ಅವರು ರಾಮನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಉತ್ತಮ ಕಾರ್ಯ ನಡೆಯುತ್ತಿದೆ ಎಂದು ಶ್ಲಾಘಿಸಿದರು.