ರಾಮನಗರ : ವಿಶ್ವದಲ್ಲೇ ಅತಿ ದೊಡ್ಡ ರೇಷ್ಮೇ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಲ್ಲೆ ರಾಮನಗರ. ಇಲ್ಲಿನ ರೇಷ್ಮೆ ಬೆಳೆಗಾರರ ಗೋಳು ಕೇಳೋರೆ ಇಲ್ಲದಂತಾಗಿದೆ. ರೇಷ್ಮೆ ಬೆಳೆಗಾರರು ತಿಂಗಳು ಪೂರ್ತಿ ಶ್ರಮ ಹಾಕಿ ಬೆಳೆ ಬೆಳೆದ್ರು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿರುವ ಕಾರಣ ಕಂಗೆಟ್ಟಿದ್ದಾರೆ. ಇದರ ಜೊತೆಗೆ ಇದೀಗ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ರೈತರಿಗೆ ನೆರವಾಗಿತ್ತೆನ್ನುವ ಮಹದಾಸೆಯಿತ್ತು, ಅದೂ ನುಂಗಲಾರದ ತುತ್ತಾಗಿದ್ದು ದಿನನಿತ್ಯ ರೇಷ್ಮೆ ಮಾರುಕಟ್ಟೆಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶ್ವ ಶ್ರೇಷ್ಠ ಮಾರುಕಟ್ಟೆಗೆ ಹೆಸರಾಗಿರುವ ಕಾರಣ, ಹೊರ ಜಿಲ್ಲೆಯ ರೈತರೂ ತಮ್ಮ ಬೆಳೆಯನ್ನ ತಂದು ಮಾರಾಟ ಮಾಡ್ತಿದ್ದಾರೆ. ತಿಂಗಳ ಪೂರ್ತಿ ಶ್ರಮ ಹಾಕಿ ಬೆಳೆದ ರೇಷ್ಮೆ ಬೆಳೆಯನ್ನು ತಂದು ಮಾರಾಟ ಮಾಡಿದ ರೈತರು ದಿನನಿತ್ಯ ಹಣಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಯೋಗಿಕವಾಗಿ ರಾಮನಗರದಲ್ಲಿ ಅಳವಡಿಸಿರುವ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಸಮರ್ಪಕ ನಿರ್ವಹಣೆ ಇಲ್ಲದೆ ಈ ಅವಸ್ಥೆ ಬಂದೊದಗಿದೆ.
ಮಾರುಕಟ್ಟೆಯಲ್ಲಿ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಜಾರಿಯಲ್ಲಿದ್ದು, ರೈತರಿಗೆ ಎರಡು ದಿನ, ಮೂರು ದಿನಗಳಲ್ಲಿ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಲಾಗುತ್ತೆ ಎಂದು ರೈತರನ್ನ ಸಾಗ ಹಾಕಲಾಗ್ತಿದೆ. ಆದ್ರೆ 10,15 ದಿನಗಳಲ್ಲದೆ ತಿಂಗಳೇ ಕಳೆದ್ರು ರೈತರಿಗೆ ಹಣ ಸಿಗ್ತಿಲ್ಲ. ಇದ್ರಿಂದ ರೈತರು ರೇಷ್ಮೆ ಮಾರುಕಟ್ಟೆಗೆ ಅಲೆದಾಡುವಂತಾಗಿದೆ. ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಅಧಿಕಾರಿಗಳು ಮೌನ ವಹಿಸುತ್ತಿದ್ದಾರೆ.
ಒಟ್ಟಾರೆ ಕೊಟ್ಟೋನು ಕೋಡಂಗಿ ಈಸ್ಕೊಂಡೋನು ವೀರಭದ್ರ ಅನ್ನೋ ಪರಿಸ್ಥಿತಿ ಇದೀಗ ರೇಷ್ಮೆ ಬೆಳೆಗಾರರಾದ್ದಾಗಿದೆ. ತಿಂಗಳ ಪೂರ್ತಿ ಶ್ರಮ ಹಾಕಿ ಬೆಳೆ ಬೆಳೆದ್ರೂ ಹಣಕ್ಕಾಗಿ ತಿಂಗಳುಗಟ್ಟಲೇ ಕಾಯುವಂತಾಗಿದೆ.