ರಾಮನಗರ: ಭಾರಿ ವಿವಾದಕ್ಕೆ ಕಾರಣವಾಗಿದ್ದ ಬಿಡದಿಯ ನಿತ್ಯಾನಂದ ಸ್ವಾಮೀಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಅನುಯಾಯಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶ ನೀಡಿದೆ. ಈ ಪ್ರಕರಣದ 3ನೇ ಆರೋಪಿಯಾದ ಶಿವವಲ್ಲಬನೇನಿ ಹಾಗೂ 6ನೇ ಆರೋಪಿ ಜಮುನಾರಾಣಿ ಇಬ್ಬರಿಗೂ ಜಾಮೀನು ರಹಿತ ವಾರಂಟ್ ಜಾರಿ ಮಾಡಲು ನ್ಯಾಯಾಲಯ ಬುಧವಾರ ಆದೇಶಿಸಿದೆ.
2023ರ ಫೆಬ್ರವರಿಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಜಾರಿಗೊಳಿಸಿರುವ ಆದೇಶಗಳನ್ನು ಪರಿಶೀಲಿಸಿದ ಜಿಲ್ಲಾ ನ್ಯಾಯಾಲಯ, ಪ್ರಕರಣದ 3ನೇ ಆರೋಪಿ ಶಿವವಲ್ಲಬನೇನಿ ಇಂದೂ ಕೂಡ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲು ಆದೇಶ ಕೊಟ್ಟಿದೆ.
ಆಗಸ್ಟ್ 5ಕ್ಕೆ ವಿಚಾರಣೆ ಮುಂದೂಡಿಕೆ: 6ನೇ ಆರೋಪಿ ಜಮುನಾ ರಾಣಿ ಕೂಡ ನ್ಯಾಯಾಲಯ ವಿಧಿಸಿದ ಷರತ್ತುಗಳನ್ನು ಪಾಲಿಸದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಆರೋಪಿಯು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯ ಅವರ ವಿರುದ್ಧವೂ ಜಾಮೀನು ರಹಿತ ವಾರಂಟ್ ಜಾರಿಗೊಳಿಸುವಂತೆ ಆದೇಶ ನೀಡಿದೆ. 2023ರ ಆಗಸ್ಟ್ 5ಕ್ಕೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಈ ಹಿಂದೆ ಇ-ಪೌರತ್ವ ನೀಡಲು ಮುಂದಾಗಿದ್ದ ನಿತ್ಯಾನಂದ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಇತ್ತೀಚೆಗೆ ತಮ್ಮದೇ ಆದ ಕೈಲಾಸ ದೇಶದಲ್ಲಿ ನೆಲೆಸಿದ್ದಾರೆ. ತಮ್ಮ ಕೈಲಾಸ ದೇಶದ ಪ್ರತಿನಿಧಿ ಮಾ ವಿಜಯಪ್ರಿಯ ನಿತ್ಯಾನಂದ ಜಿನಿವಾದಲ್ಲಿ ನಡೆದಿದ್ದ ವಿಶ್ವ ಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಡಿಯೋವನ್ನು ನಿತ್ಯಾನಂದ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ನಂತರ ಈ ಕೈಲಾಸ ದೇಶಕ್ಕೆ ಹೋಗುವವರಿಗೆ ಇ-ಪೌರತ್ವ ನೀಡಲಾಗುವುದು ಎಂದು ನಿತ್ಯಾನಂದ ಘೋಷಣೆ ಮಾಡಿದ್ದರು.
ಕ್ಯೂ ಆರ್ ಕೋಡ್ನಿಂದ ಪೌರತ್ವ: ಮೊದಲು ತಮ್ಮ ಕೈಲಾಸ ದೇಶಕ್ಕೆ ಬರುವವರಿಗೆ ಮುಕ್ತ ಆಹ್ವಾನ ನೀಡಿದ್ದ ನಿತ್ಯಾನಂದ ಸ್ವಾಮೀಜಿ. ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದ ನಿತ್ಯಾನಂತ ಯುನೈಟೆಡ್ ಸ್ಟೇಟ್ ಆಫ್ ಕೈಲಾಸಕ್ಕೆ ಉಚಿತ ಪೌರತ್ವಕ್ಕೆ ಅರ್ಜಿ ಆಹ್ವಾನ ನೀಡಿದ್ದ. ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಉಚಿತ ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಮಾಡಿ ಎಂದು ಟ್ಯಾಗ್ ಲೈನ್ ಅಡಿಯಲ್ಲಿ ಟ್ವೀಟ್ ಮಾಡಿದ್ದನು. ಇದಕ್ಕೆ ಕ್ಯೂಆರ್ ಕೋಡ್ ಅನ್ನು ನೀಡಲಾಗಿತ್ತು. ಅದನ್ನು ಸ್ಕಾನ್ ಮಾಡಿ ಅರ್ಜಿ ಸಲ್ಲಿಸುವಂತೆ ಮಾಹಿತಿ ಕೊಟ್ಟಿದ್ದನು. ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ಈ ಟ್ವೀಟ್ ಮಾಡಿದ್ದ.
ಇದನ್ನೂ ಓದಿ: 'ಕಾಲ್ಪನಿಕ ದೇಶ'ದ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ: ನಿತ್ಯಾನಂದನ ಪ್ರತಿನಿಧಿ ಹೇಳಿಕೆಗೆ ವಿಶ್ವಸಂಸ್ಥೆ ಸ್ಪಷ್ಟನೆ