ರಾಮನಗರ: ನಿಖಿಲ್ ಕುಮಾರಸ್ವಾಮಿ ಮದುವೆಗೆ ಜಿಲ್ಲೆಯ ಪ್ರತಿಯೊಬ್ಬರಿಗೂ ಆಮಂತ್ರಣ ನೀಡಿ ಮನಸ್ಫೂರ್ತಿಯಾದ ಊಟ ಹಾಕುವ ತಮ್ಮ ಆಸೆ ಈಡೇರಿಸಿಕೊಳ್ಳುವುದಾಗಿ ಹೆಚ್ಡಿಕೆ ಹೇಳಿದ್ದರು. ಇದರ ಬೆನ್ನಲ್ಲೇ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಅವರ ಮನವಿ ಪೂರ್ವಕ ಪತ್ರ ಸಖತ್ ಸದ್ದು ಮಾಡುತ್ತಿದೆ.
ಆಮಂತ್ರಣ ಪತ್ರಿಕೆಯಲ್ಲೇನಿದೆ :
ನನ್ನ ಪ್ರೀತಿಯ ಎಲ್ಲರಿಗೂ ಸ್ವಪ್ರೇಮ ನಮಸ್ತೆ. ನಿಮಗೊಂದು ಪ್ರೀತಿಯ ಕರೆಯೋಲೆ, ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಆಶೀರ್ವದಿಸಿ, ಪುನರ್ ಜನ್ಮ ನೀಡಿದ್ದು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ನಿಮಗೆಲ್ಲ ನಾನು ಮತ್ತು ನಮ್ಮ ಕುಟುಂಬ ಸದಾ ಋಣಿ. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು. ಅದನ್ನು ನೀವು ಸದಾ ಸಲಹುತ್ತಾ ಬಂದಿರುವ ನಿಮ್ಮಗಳ ಪ್ರೀತಿ ಸದಾ ಕೃತಜ್ಞತೆಯಿಂದ ಸ್ಮರಿಸುವಂತದ್ದು. ಈ ನಾಡಿನ ಜನರಿಂದ ಪಡೆದ, ರಾಜಕೀಯ ಅಧಿಕಾರ ಗೌರವಗಳನ್ನು ನಿಮಗಾಗಿಯೇ, ಸಮರ್ಪಿಸುತ್ತಾ ಬಂದಿದ್ದೇನೆ. ಅದರ ಹಕ್ಕುದಾರರು ನೀವೇ ಆಗಿರುತ್ತೀರಾ.
ರಾಜಕೀಯ ಬದುಕಿನ ಸ್ಥಿತ್ಯಂತರದಲ್ಲಿ 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಸೌಭಾಗ್ಯ ನಾಡಿನ ಜನತೆಯ ಮನೋಭಿಲಾಷೆಯಂತೆ ನನಗೆ ಧಕ್ಕಿದ್ದು, ನಿಮ್ಮ ಆಶೀರ್ವಾದದ ಫಲ. ಮುಖ್ಯಮಂತ್ರಿಯಾಗಿದ್ದುಕೊಂಡು ಸಾಮಾನ್ಯನಂತೆ ಬದುಕುವುದನ್ನು ಮರೆಯಲಿಲ್ಲ. ಅಸಹಾಯಕರು ಮತ್ತು ಬಡವರ ಬದುಕಿನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಇದು ನನ್ನ ಆತ್ಮಬಲವು, ದೌರ್ಬಲ್ಯವು ಎಂದು ಭಾವಿಸುವಲ್ಲಿ ಹಿಂಜರಿಕೆ ಇಲ್ಲ. ತನ್ನಂತೆಯೇ ಇರುವ ಮನುಷ್ಯರು ಕಷ್ಟ ಕೋಟಲೆಗಳಿಂದ ಕೊರಗುವುದನ್ನು ಕಂಡಾಗ ನನ್ನ ಕರಳು, ಮಿಸುಕಾಡುತ್ತದೆ. ಹೀಗಾಗಿಯೇ ನನ್ನ ಪದವಿ ಸ್ಥಾನಮಾನ, ಸಂದರ್ಭಗಳನ್ನು ಲೆಕ್ಕಿಸದೇ ಮತ್ತೆ ಮತ್ತೆ ಕಣ್ಣುಗಳು ನೀರಾಗಿ ಬಿಡುತ್ತವೆ. ಜನರಿಗೆ ಮಿಡಿದ ನನ್ನ ಪಾಲಿನ ಕರ್ತವ್ಯದಲ್ಲಿ ಎಷ್ಟು ಸಫಲ, ಎಷ್ಟು ವಿಫಲ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟದ್ದು.
ಎರಡು ಸಲವು ಮೈತ್ರಿ ಸರ್ಕಾರದಲ್ಲಿಯೂ ಮುಖ್ಯಮಂತ್ರಿಯಾಗಿದ್ದರಿಂದ ನನ್ನ ಹೆಬ್ಬಯಕೆಯಂತೆ ಜನಸಮಾನ್ಯರ ದುಖಃ ದುಮ್ಮಾನಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ಪಂದಿಸಲು ಆಗಲಿಲ್ಲ. ಎಂಬ ನೋವು ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾದ ನನ್ನನು ಈಗಲು ಕಾಡುತ್ತಿದೆ. ನೀವು ತೋರಿದ ಪ್ರೀತಿ-ಹರಸಿದ ರೀತಿ ನನ್ನ ಬದುಕಿನ ಪಥವನ್ನು ಬದಲಿಸಿದೆ. ನನ್ನನ್ನು ಕಂಡರೆ ಅದ್ಯಾಕೊ ಪಕ್ಷಾತೀತವಾಗಿ ಜನ ಸಾಮಾನ್ಯರು ಬಲು ಇಷ್ಟ ಪಡುತ್ತಾರೆ. ಪ್ರೀತಿ ಎಂಬುದನ್ನು ರಕ್ಷಿಸಿಕೊಳ್ಳಲು ಪ್ರೀತಿಯನ್ನಷ್ಟೆ ಬೆರೆಸಿದಾಗ ಸಾಧ್ಯ. ಕರುಣೆ ಸ್ನೇಹದ ಮನೋಗತವೇ ನಾನು. ನಾನು ಸಾಮಾನ್ಯನೊಳಗೆ ಸಾಮಾನ್ಯನಂತೆ ಎಲ್ಲರೊಳಗೊಂಡು ಬದುಕಲು ಸಾಧ್ಯವಾಯಿತೇನೊ ಎಂಬ ತೃಪ್ತಿ ಇದೆ. ಈ ಬದುಕೆ ನನ್ನಗಿಷ್ಟ. ನನ್ನ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ನಾಯಕರು ಅವರಿಗೆ ನನ್ನಿಂದ ವ್ಯಕ್ತಿಗತವಾಗಿ ನೆರವು ಸಿಗದಿದ್ದಾಗ ಸ್ಥಾನಮಾನ ಧಕ್ಕದಿದ್ದರೂ, ಅವರ ಮನೆಯ ಕುಟುಂಬ ಸದಸ್ಯ ಎಂಬಂತೆ ಅಭಿಮಾನದ ಪ್ರೀತಿಯ ಹೊಳೆ ಹರಿಸುತ್ತಾರೆ. ಇದೊಂದು ಸುಕೃತ ಫಲವೇ ಸರಿ.
ಈ ನಾಡಿನ ನಿಮ್ಮೆಲ್ಲರ ಪ್ರಿತಿಯನ್ನು ಕಣ್ತುಂಬಿಸಿಕೊಳ್ಳಲು, ಅದರೊಳಗೆ ಮಿಂದು ಮಗುವಾಗಲು ಅಪೂರ್ವವಾದ ಸಂದರ್ಭವೊಂದು ಕೂಡಿ ಬಂದಿದೆ. ಏ.17ರಂದು ನನ್ನ ಮಗನ ವಿವಾಹ ರಾಮನಗರದಲ್ಲಿ ನಡೆಯಲಿದೆ. ಇದು ನಿಮ್ಮ ಕುಮಾರಣ್ಣನ ಮನೆಯ ಸಂಭ್ರಮ. ಈ ಸಂದರ್ಭದಲ್ಲಿ ನೀವಿದ್ದು, ನನ್ನ ಮಗ -ಸೊಸೆಯನ್ನು ಹರಸಿದರೆ ನಿಮ್ಮ ಆ ಪ್ರೀತಿ ನನ್ನ ಹೃದಯವನ್ನು ಇನ್ನಷ್ಟು ಚೈತನ್ಯ ಪೂರ್ಣಗೊಳಿಸಲಿದೆ. ಇದನ್ನು ವೈಯಕ್ತಿಕ ಆಮಂತ್ರಣ ಎಂದು ಪರಿಭಾವಿಸಿ, ನೀವು ಮತ್ತು ಕುಟುಂಬದವರು ಬರಲೇಬೇಕು. ಜೊತೆಯಲ್ಲೇ ಕುಳಿತು ಊಟ ಮಾಡೋಣ. ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿಲ್ಲ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಿಮಗಾಗಿಯೇ ಕಾಯುತ್ತಿರುತ್ತೇನೆ. ಇಂತಿ ನಿಮ್ಮ ಮನೆ ಮಗ ಹೆಚ್.ಡಿ.ಕುಮಾರಸ್ವಾಮಿ ಎಂದು ವೈರಲ್ ಆದ ಪತ್ರದಲ್ಲಿದೆ.
ಒಟ್ಟಾರೆ, ಹೆಚ್ಡಿ ಕುಮಾರಸ್ವಾಮಿ ತಮಗೆ ರಾಜಕೀಯ ಪುನರ್ಜನ್ಮ ಕೊಟ್ಟ ಕ್ಷೇತ್ರದಲ್ಲಿಯೇ ಮಗನ ಮದುವೆ ಮಾಡಿ ಎಲ್ಲರೊಟ್ಟಿಗೆ ಸೇರಿ ಸಂಭ್ರಮಿಸುವ ಇರಾದೆಯೊಂದಿಗೆ ಮುನ್ನುಗ್ಗಿದ್ದಾರೆ. ಈಗಾಗಲೇ ಜಾನಪದ ಲೋಕದ ಬಳಿ ಸಿದ್ಧತೆ ನಡೆಯುತ್ತಿದೆ. ಅಲ್ಲಿ ಬೋರ್ವೆಲ್ ಕೊರೆಸಲಾಗಿದೆ. ನೀರು ಕೂಡ ಯತೇಚ್ಛವಾಗಿಯೇ ಸಿಕ್ಕಿದೆ. ಇನ್ನು ಹೆಚ್ಡಿಕೆ ದಂಪತಿ ಕ್ಷೇತ್ರದ ಜನತೆಗೂ ಮನವಿ ಮಾಡಿಕೊಂಡಿದ್ದಾರೆ. ಇದಲ್ಲದೇ ಮುಂದಿನ ದಿನಗಳಲ್ಲಿ ತಮ್ಮ ಮುಖಂಡರು ಕಾರ್ಯಕರ್ತರ ಮುಖಾಂತರ ಎಲ್ಲರಿಗೂ ಮದುವೆಗೆ ಆಹ್ವಾನಿಸಲಾಗುತ್ತದೆ ಎನ್ನಲಾಗಿದೆ.