ರಾಮನಗರ: ನವಜಾತ ಶಿಶುವನ್ನು ಪಾರ್ಕ್ನ ಪೊದೆಯಲ್ಲಿ ಬಿಟ್ಟು ಹೋಗಿರುವ ಘಟನೆ ಪಟ್ಟಣದ ಹೌಸಿಂಗ್ ಬೋರ್ಡ್ ಉದ್ಯಾನವನದಲ್ಲಿ ಪತ್ತೆಯಾಗಿದೆ.
ತಡರಾತ್ರಿ ಜನಿಸಿದ ಹೆಣ್ಣು ಶಿಶುವನ್ನು ಜನಿಸಿದ ತಕ್ಷಣವೇ ಬಟ್ಟೆ ಹಾಗು ಚೀಲದಲ್ಲಿ ಸುತ್ತಿ ಪಾರ್ಕ್‌ನಲ್ಲಿ ಹಾಕಿ ಹೋಗಿದ್ದಾರೆ. ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದವರು ಗಮನಿಸಿ ಪೊಲೀಸರು ಹಾಗು ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಿಡಿಪಿಒ ಸಿದ್ದಲಿಂಗಯ್ಯ ಮತ್ತು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಶಿಶುವನ್ನು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.