ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ರಾಜಕೀಯ ನಾಯಕರ ತೋಳ್ಬಲ, ವಾಕ್ಸಮರಕ್ಕೆ ವೇದಿಕೆಯಾಯಿತು. ಸಚಿವ ಡಾ.ಅಶ್ವತ್ಥ್ ನಾರಾಯಣರ ಮಾತುಗಳು ಸಂಸದ ಡಿ.ಕೆ.ಸುರೇಶ್ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿತು. ಸಚಿವ ಸಂಸದರ ನಡುವೆ ನಡೆದ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ, ಸಚಿವರ ಮೇಲೆ ನೀರಿನ ಬಾಟಲ್ ಕೂಡ ಎಸೆದ ಘಟನೆಯೂ ನಡೆಯಿತು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕೇವಲ ಬಿಜೆಪಿಯಿಂದ ಮಾತ್ರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕರು ಜಿಲ್ಲೆಯ ಅಭಿವೃದ್ಧಿ ಶ್ರಮಿಸಿದ್ದಾರೆ. ಬಿಜೆಪಿ ನಾಯಕರು ಅಭಿವೃದ್ಧಿ ವಿಚಾರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮಹಾನ್ ನಾಯಕರಾದ ಡಾ.ಅಂಬೇಡ್ಕರ್ ಮತ್ತು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಇನ್ನೂ ಅದ್ಧೂರಿಯಾಗಿ ನಡೆಯಬೇಕಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು ಎಂದು ಹೇಳಿದರು.
ಸಚಿವರಿಂದಲೇ ಸಿಎಂಗೆ ಅವಮಾನ: ಎಂಎಲ್ಸಿ ರವಿ ಕಿಡಿ
ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮೇಲ್ಮನೆ ಸದಸ್ಯ ರವಿ, ಸಚಿವ ಅಶ್ವತ್ಥ್‌ನಾರಾಯಣ ಅವರಿಂದಲೇ ಕಾರ್ಯಕ್ರಮ ಹಾಳಾಯಿತು. ಮುಖ್ಯಮಂತ್ರಿಗಳು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲು ಸಚಿವರೇ ಕಾರಣ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲ್ಲಿ ನುಸಿ ರೋಗ ಕಂಡು ಬಂದ ಕಾರಣ ಬೆಳೆ ಕುಸಿತ ಕಂಡಿದೆ. ಇದರಿಂದ ರೇಷ್ಮೆ ದರ ಅಧಿಕವಾಗಿದೆ. ಈ ಬಗ್ಗೆ ಜ್ಞಾನವಿಲ್ಲದ ಸಚಿವ ಅಶ್ವತ್ಥ್ ನಾರಾಯಣ ಅವರು ಇದಕ್ಕೆ ಬಿಜೆಪಿಯೇ ಕಾರಣ ಎಂದು ಅಲ್ಪಜ್ಞಾನಿಯಂತೆ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದರು.
ಅಸಾಂವಿಧಾನಿಕ ಪದ ಬಳಕೆ ಕುರಿತು ಪ್ರತಿಕ್ರಿಯಿಸಿದ ರವಿ, ಸಚಿವರೇ ಕೆಟ್ಟ ಪದಗಳನ್ನು ಬಳಸಿದರು. ಉದ್ವೇಗದಲ್ಲಿ ನಾವೂ ಕೆಲ ಪದಗಳನ್ನು ಬಳಸಿದ್ದೇವೆ ಎಂದರು.
ಇದನ್ನೂ ಓದಿ: ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?