ರಾಮನಗರ: ಜಿಲ್ಲೆಯ ಹಾರೋಹಳ್ಳಿಯ ಸ್ಟವ್ ಕ್ರಾಫ್ಟ್ ಕಂಪನಿಯಲ್ಲಿ ವಿಷಹಾರ ಸೇವನೆಯಿಂದಾಗಿ 35 ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿರುವ ಸ್ಟವ್ ಕ್ರಾಪ್ಟ್ ಕಂಪನಿಯಲ್ಲಿ ಬೆಳಗ್ಗೆ ತಿಂಡಿ ಸೇವಿಸಿದ ಕಾರ್ಮಿಕರಲ್ಲಿ ಬಹುತೇಕ ಅಸ್ವಸ್ಥಗೊಂಡಿದ್ದರು. ತಿಂಡಿಯಲ್ಲಿ ಹಲ್ಲಿ ಬಿದ್ದಿದೆ ಎಂದು ವದಂತಿ ಹಬ್ಬಿದ್ದು ಕಾರ್ಮಿಕರಲ್ಲಿ ಆತಂಕ ಮೂಡಿತ್ತು. ಅಸ್ವಸ್ಥಗೊಂಡಿದ್ದ ಕಾರ್ಮಿಕರೆಲ್ಲರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ನಂತರ ವೈದ್ಯರ ಸೂಚನೆ ಮೇರೆಗೆ ಒಬ್ಬೊಬ್ಬರಂತೆ ಆಸ್ಪತ್ರೆಯಿಂದ ಕಾರ್ಮಿಕರು ಡಿಸ್ಚಾರ್ಜ್ ಆಗುತ್ತಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.