ರಾಮನಗರ: ಕೊರೊನಾ ಎರಡನೇ ಅಲೆಯಿಂದ ಬಹಳಷ್ಟು ಜನರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಹೀನಾಯ ಸ್ಥಿತಿ ಬಂದಿದೆ. ಅದರಲ್ಲೂ ಬೇರೆ ಜಿಲ್ಲೆಯಿಂದ ಬಂದಿರುವ ಕೂಲಿಕಾರ್ಮಿಕರಿಗೆ ಇತ್ತ ಕೆಲಸವೂ ಇಲ್ಲ, ಅತ್ತ ಊಟವೂ ಇಲ್ಲವೆಂಬ ಪರಿಸ್ಥಿತಿ ಇದೆ. ಈ ಹಿನ್ನಲೆ ಸಚಿವ ಸಿ.ಪಿ.ಯೋಗೇಶ್ವರ್ ದಿನನಿತ್ಯವೂ ಚನ್ನಪಟ್ಟಣದಲ್ಲಿ 3 ಸಾವಿರ ಜನರಿಗೆ ಎರಡೊತ್ತಿನ ಊಟದ ವ್ಯವಸ್ಥೆ ಮಾಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಉತ್ತರ ಕರ್ನಾಟಕದ ಜನರು 3 ಸಾವಿರಕ್ಕೂ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಕೆಲವರು ಲಾಕ್‌ಡೌನ್ ಆಗ್ತಿದ್ದಂತೆ ತಮ್ಮ ಊರು ಸೇರಿದ್ದರು. ಆದರೆ ಕೆಲವರು ಇಲ್ಲೇ ಉಳಿದಿದ್ದು ಅವರು ಒಂದೊತ್ತಿನ ಊಟದ ವ್ಯವಸ್ಥೆಯೂ ಇಲ್ಲದೇ ಪರದಾಡುತ್ತಿದ್ದರು. ಇದರ ಜೊತೆಗೆ ರಸ್ತೆಗಳಲ್ಲಿ ಪೇಪರ್ ಹಾಯುವವರು, ನಿರ್ಗತಿಕರು, ಭಿಕ್ಷುಕರಿಗೆ ಲಾಕ್‌ಡೌನ್‌ನಿಂದಾಗಿ ಊಟವೇ ಇಲ್ಲದಂತಾಗಿತ್ತು. ಇವರ ನೆರವಿಗೆ ಬಂದಿದ್ದಾರೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್.
ಸಚಿವ ಯೋಗೇಶ್ವರ್ ಕಳೆದ ಒಂದು ವಾರದಿಂದ ದಿನನಿತ್ಯವೂ ಬೆಳಗ್ಗೆ ತಿಂಡಿ, ರಾತ್ರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ನಗರದ ನಿರ್ಗತಿಕರಿಗೂ ಸಹ ಎರಡೊತ್ತಿನ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ.
ಇನ್ನು ಎರಡನೇ ಅಲೆಯ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ನಗರದಲ್ಲಿ ಎಷ್ಟು ಉತ್ತರಕರ್ನಾಟಕದ ಜನರು ಊಟಕ್ಕೆ ಪರದಾಡುತ್ತಿದ್ದಾರೆಂದು ಸರ್ವೇ ಮಾಡಿಸಿದ್ದರು. ಈಗ ದಿನನಿತ್ಯವೂ ನಗರದ ಎಲ್.ಎನ್.ಕಲ್ಯಾಣಮಂಟಪದಲ್ಲಿ ಅಡುಗೆ ಮಾಡಿಸುತ್ತಿದ್ದು, ವಾಂಗಿಬಾತ್, ಟೊಮ್ಯೊಟೋ ಬಾತ್, ಮೆಂತ್ಯಪಲಾವ್, ಬಿಸಿಬೇಳೆಬಾತ್, ಪುಳಿಯೊಗರೆ ಸೇರಿದಂತೆ ದಿನವೂ ಸಹ ಬಗೆಬಗೆಯ ತಿಂಡಿ, ಊಟವನ್ನು ಜನರಿಗೆ ನೀಡಲಾಗುತ್ತಿದೆ.