ರಾಮನಗರ: ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರ ಕಿರುಕುಳದಿಂದ ಬೇಸತ್ತ ಸಂಘದ ಮುಖ್ಯ ಕಾರ್ಯನಿರ್ವಾಹಕರೊಬ್ಬರು ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮಾಕಳಿಯಲ್ಲಿ ನಡೆದಿದೆ.
ಸಂಘದ ಮುಖ್ಯ ಕಾರ್ಯನಿರ್ವಾಹಕ ರಮೇಶ್ (45) ಆತ್ಮಹತ್ಯೆಗೆ ಶರಣಾದವರು. ಕಳೆದ 15 ವರ್ಷದಿಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಘದ ಅಧ್ಯಕ್ಷ ಉಮೇಶ್ ಹಾಗೂ ನಿರ್ದೇಶಕರ ಕಿರುಕುಳವೇ ರಮೇಶ್ ಆತ್ಮಹತ್ಯೆಗೆ ಕಾರಣ ಎನ್ನಲಾಗ್ತಿದೆ.
ಕೆಲ ತಿಂಗಳಿಂದ ಮುಖ್ಯಕಾರ್ಯನಿರ್ವಾಹಕ ರಮೇಶ್ ಮೇಲೆ ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದರು. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಮಾನಸಿಕವಾಗಿ ನೋವು ನೀಡುತ್ತಿದ್ದರೆಂದು ಎರಡು ಪುಟಗಳಲ್ಲಿ ಬರೆದಿರುವ ಡೆತ್‍ನೋಟ್‍ನಲ್ಲಿ ರಮೇಶ್ ಉಲ್ಲೇಖಿಸಿದ್ದಾರೆ.
ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 15 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಆದರೆ ನನ್ನ ಪ್ರಾಮಾಣಿಕ ಸೇವೆಯಿಂದ ತಮಗೆ ಯಾವುದೇ ರೀತಿಯ ಲಾಭವಿಲ್ಲ ಎಂದು ಸಂಘದ ಅಧ್ಯಕ್ಷ ಉಮೇಶ್ ಹಾಗೂ ನಿರ್ದೇಶಕರು ನನ್ನನ್ನು ಅಪರಾಧಿಯಂತೆ ನೋಡುತ್ತಾ ಪ್ರತಿನಿತ್ಯ ಕಿರುಕುಳ
ನೀಡುತ್ತಿದ್ದರು. ಇದರಿಂದ ಮಾನಸಿಕವಾಗಿ ಮನನೊಂದು ಬೇರೆ ಮಾರ್ಗವಿಲ್ಲದೆ ಆತ್ಮಹತ್ಯೆಯೊಂದೇ ದಾರಿ ಎಂದು ತಿಳಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ರಮೇಶ್ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಈ ಘಟನೆ ಬಗ್ಗೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.