ರಾಮನಗರ: ಪ್ರೀತಿಸಿ ಅಂತರ್ಜಾತಿ ಯುವಕನನ್ನು ವಿವಾಹವಾಗಲು ಮುಂದಾಗಿದ್ದಕ್ಕೆ ಹುಡುಗಿ ಮನೆಯವರು ಅಡ್ಡಿಪಡಿಸಿದ ಘಟನೆ ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಯುವತಿ ಎಸ್. ಅಶ್ಚಿತ, ಯುವಕ ಸಿ. ನವೀನ್ ಕುಮಾರ್ ಒಂದೇ ಗ್ರಾಮದವರಾಗಿದ್ದು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಳಿಕ ಜ.31ರಂದು ಸೋಲೂರು ಗ್ರಾಮದ ಸಿ. ನವೀನ್ ಮನೆಯಲ್ಲಿ ವಿವಾಹ ಮಾಡಿಕೊಂಡು ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳಲು ಆಗಮಿಸಿದ್ದಾರೆ.
ಈ ವೇಳೆ ಉಪನೋಂದಣಾಧಿಕಾರಿ ಕಚೇರಿಗೆ ಬಂದ ಅಶ್ಚಿತ ಸಂಬಂಧಿಕರು, ನಮ್ಮ ಅಣ್ಣನ ಮಗಳು ರಿಜಿಸ್ಟರ್ ಮಾಡಿಕೊಳ್ಳಲು ನಮ್ಮ ತಕರಾರಿದೆ ಎಂದು ಕಚೇರಿಗೆ ತಿಳಿಸಿದ್ದಾರೆ. ಅಲ್ಲದೆ ಜಮೀನು ಹಕ್ಕುಪತ್ರ ಬಿಡುಗಡೆ ಪತ್ರಕ್ಕೆ ಸಹಿ ಹಾಕಿ, ಇನ್ನುಮುಂದೆ ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಪತ್ರ ಬರೆದುಕೊಡಿ ಎಂದು ತಾಕೀತು ಮಾಡಿದ್ದಾರೆ. ಈ ವೇಳೆ ಹುಡುಗನ ಸಂಬಂಧಿಕರು ಮತ್ತು ಹುಡುಗಿ ಮನೆಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಪೊಲೀಸರು ಭೇಟಿ ನೀಡಿ ಯುವಕ ಹಾಗೂ ಯುವತಿಯಿಂದ ಮಾಹಿತಿ ಕಲೆಹಾಕಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಣಧೀರ ಪಡೆ ವೇದಿಕೆ ಅಧ್ಯಕ್ಷ ಕೆ.ಆರ್ ಶಂಕರ ಗೌಡ ಮಧ್ಯಪ್ರವೇಶಿಸಿ ಜಮೀನು ಹಕ್ಕು ಬಿಡುಗಡೆ ಪತ್ರಕ್ಕೆ ಯುವತಿಯಿಂದ ಸಹಿ ಹಾಕಿಸಿ ಮದುವೆ ನೋಂದಣಿ ಮಾಡಿಸಿದ್ದಾರೆ.
ಯುವತಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, ಯುವಕ ಎಚ್‍ಡಿಎಫ್‍ಸಿ ಬ್ಯಾಂಕ್ ನೌಕರನಾಗಿದ್ದಾನೆ. ಈ ವೇಳೆ ಯುವತಿ ಎಸ್. ಅಶ್ಚಿತ ಮಾತನಾಡಿ, ಕಳೆದ 5 ವರ್ಷಗಳಿಂದ ಸಿ. ನವೀನ್ ಕುಮಾರ್ನನ್ನು ಪ್ರೀತಿಸುತ್ತಿದ್ದು, ಈಗ ಮದುವೆಯಾಗಿದ್ದೇವೆ. ಸಬ್‍ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಬಂದಾಗ, ನಮ್ಮ ಕುಟುಂಬಸ್ಥರು ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಬರೆಸಿಕೊಂಡು ಜಮೀನು ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಮುಂದೆ ಯಾವುದೇ ಅನಾಹುತ ಸಂಭವಿಸಿದರೆ ನಮ್ಮ ಕುಟುಂಬವೇ ಹೊಣೆಯಾಗಿರುತ್ತದೆ ಎಂದು ಆರೋಪಿಸಿದರು.
ಇತ್ತ ಯುವಕ ಸಿ. ನವೀನ್ ಕುಮಾರ್ ಮಾತನಾಡಿ, ಅಶ್ಚಿತಗೆ ಬೇರೆಯವರೊಂದಿಗೆ ಮದುವೆ ಮಾಡಲು ಆಕೆಯ ಕುಟುಂಬಸ್ಥರು ಮುಂದಾಗಿದ್ದರು. ಈ ವಿಷಯ ನನಗೆ ಗೊತ್ತಾಗಿದ್ದರಿಂದ ಇಂದು ಅವಳೊಂದಿಗೆ ರಜಿಸ್ಟರ್ ಮದುವೆ ಆಗಿದ್ದೇನೆ. ನಮಗೆ ಆಸ್ತಿ ಬೇಕಿಲ್ಲ, ಮುಂದೆ ನಾವು ಈ ಗ್ರಾಮದಲ್ಲಿ ಬದುಕಬೇಕೆಂಬ ಆಸೆಯಿದೆ. ನಮ್ಮಿಬ್ಬರಿಗೆ ತೊಂದರೆಯಾದರೆ ಅವರೇ ಕಾರಣರಾಗುತ್ತಾರೆ ಎಂದಿದ್ದಾನೆ.
ಇದನ್ನು ಓದಿ: ರಾಮನಗರ : ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಪೊಲೀಸ್ ಠಾಣಾವಾರು ತಂಡ ರಚನೆ