ರಾಮನಗರ : ಆಧುನಿಕತೆಯತ್ತ ಮುಖ ಮಾಡಿರುವ ಜಗತ್ತಿನಲ್ಲಿ ಇಷ್ಟಲಿಂಗಗಳು ಕಣ್ಮರೆಯಾಗುತ್ತಿವೆ. ಆದರೆ ಜಿಲ್ಲೆಯಲ್ಲಿನ ಒಂದು ಕುಟುಂಬ ಮಾತ್ರ ಇಷ್ಟಲಿಂಗ ತಯಾರಿಕೆಯನ್ನೇ ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದಿದೆ. ಅಷ್ಟೇ ಅಲ್ಲದೆ, ಇವರು ಮಾಡುವ ಲಿಂಗಗಳಿಗೆ ಶಿವರಾತ್ರಿ ಬಂದ್ರೆ ಸಾಕು ಎಲ್ಲಿಲ್ಲದ ಬೇಡಿಕೆ ಇರುತ್ತದೆ.
ಜಿಲ್ಲೆಯ ವಿಭೂತಿಕೆರೆ ಗ್ರಾಮದ ಸಿದ್ದಯ್ಯನವರ ಕುಟುಂಬ ಇಷ್ಟಲಿಂಗವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಮೂಲತಃ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದವರಾದ ಸಿದ್ಧಯ್ಯ ಬಹಳ ವರ್ಷಗಳ ಹಿಂದೆಯೇ ವಿಭೂತಿಕೆರೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಈ ಕುಟುಂಬ ಸುಮಾರು 20 ವರ್ಷಗಳಿಂದ ನಿರಂತರವಾಗಿ ಲಿಂಗವನ್ನು ತಯಾರು ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಇವರು ಜನರ ಇಚ್ಛೆಗೆ ತಕ್ಕಂತೆ ಲಿಂಗಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ. ಶಿವಲಿಂಗ ತಯಾರಿಕೆ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಜಾಗೃತೆಯಿಂದ ತಯಾರು ಮಾಡಬೇಕು. ಗೇರು ಬೀಜ, ಕರ್ಪೂರ, ತುಪ್ಪ, ರಾಳು, ಶಿಲಾರಸ, ಪಾದರಸ, ಶಾಂತರಸವನ್ನು ಉಪಯೋಗಿಸಿ ಲಿಂಗ ತಯಾರಿಸಲಾಗುತ್ತದೆ. ಈ ಲಿಂಗಗಳನ್ನು ಧರಿಸುವುದರಿಂದ ಚರ್ಮವ್ಯಾಧಿಯೂ ಗುಣವಾಗುತ್ತೆ ಎಂಬ ಪ್ರತೀತಿಯಿದೆ.
ಅಂದಹಾಗೇ ಈ ಲಿಂಗ ತಯಾರಿಕೆ ಮಾಡುತ್ತಿರುವುದು ಸಿದ್ಧಯ್ಯನವರ ಮಕ್ಕಳಾದ ಶಿವಾನಂದ ಮತ್ತು ಮಹಾದೇವ ಸ್ವಾಮಿಯವರು. ಸಿದ್ದಯ್ಯನವರು ಚನ್ನಪಟ್ಟಣ ತಾಲ್ಲೂಕಿನ ಬೇವೂರಿನ ಸಿದ್ದರಾಮಣ್ಣ ಎಂಬವರಿಂದ ಇಷ್ಟಲಿಂಗಗಳನ್ನು ತಯಾರು ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಬಳಿಕ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಕೆಲಸ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಂದಿನ ಮೈಸೂರಿನ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ ಜತ್ತಿಯವರಿಗೂ ಇಷ್ಟಲಿಂಗವನ್ನು ತಯಾರಿಸಿ ನೀಡಿದ್ದರಂತೆ.
ಇನ್ನು ಯಡಿಯೂರು, ಸಕಲೇಶಪುರದ ಬೈಕೆರೆಯಲ್ಲೂ ಸಹ 6 ಅಡಿ ಎತ್ತರದ ಲಿಂಗಗಳನ್ನು ತಯಾರಿಸಿದ್ದಾರೆ. ಇನ್ನೂ ಇಷ್ಟಲಿಂಗಗಳನ್ನು ಕೊಳ್ಳಲು ರಾಜ್ಯದ ಅನೇಕ ಜಿಲ್ಲೆಗಳಿಂದ ಜನ ಬಂದು ತಮಗಿಷ್ಟದಂತೆ ಇಷ್ಟಲಿಂಗಗಳನ್ನ ಮಾಡಿಸಿಕೊಂಡು ಹೋಗುತ್ತಾರಂತೆ.