ರಾಮನಗರ: ಪ್ರಸಿದ್ಧ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ನಡೆಯಿತು.
ಪ್ರತಿವರ್ಷದಂತೆ ಈ ವರ್ಷವೂ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೀಪೋತ್ಸವವನ್ನು ನೆರವೇರಿದೆ. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ತಾಯಿ ಚಾಮುಂಡಿಯ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಹೋಮ ಇನ್ನಿತರ ಪೂಜಾ ಕೈಂಕರ್ಯಗಳು ನೇರವೇರಿದವು. ಈ ಬಾರಿ ವಿಶೇಷವಾಗಿ ಲೋಕಾರ್ಪಣೆಗೊಂಡ ಅತಿ ಎತ್ತರದ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ಭಕ್ತರ ಕಣ್ಮನ ಸೆಳೆಯಿತು.
ದೀಪೋತ್ಸವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಎಡಿಜಿಪಿ ಭಾಸ್ಕರ್ ರಾವ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದರು.
ಕನಕಪುರದ ದೇಗುಲ ಮಠದಲ್ಲಿ ದೀಪೋತ್ಸವದ ಸಂಭ್ರಮ :
ಕನಕಪುರ ಶ್ರೀದೇಗುಲ ಮಠದಲ್ಲೂ ಕೂಡ ಅದ್ಧೂರಿಯಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇಗುಲ ಮಠದ ಹಿರಿಯ ಪರಮಪೂಜ್ಯ ಡಾ.ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಚನ್ನಬಸವ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ದೀಪೋತ್ಸವಕ್ಕೆ ರಾಜ್ಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಕೂಡ ಆಗಮಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ 6 ಮಂದಿಗೆ ಒಮಿಕ್ರಾನ್ ದೃಢ: ದೇಶದಲ್ಲಿ 12ಕ್ಕೇರಿತು ರೂಪಾಂತರಿ ವೈರಸ್ ಕೇಸ್