ರಾಮನಗರ: ಕೋವಿಡ್ 19 ವೈರಸ್ ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿ ತಮ್ಮ ಪುತ್ರ ನಿಖಿಲ್ ಮದುವೆಯನ್ನು ಸರಳವಾಗಿ ಎರಡೂ ಕುಟುಂಬಗಳ ಸಮ್ಮುಖದಲ್ಲೇ ನೆರವೇರಲಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ರಾಮನಗರದ ಕೇತಗಾನಹಳ್ಳಿ ಫಾರ್ಮ್ ಹೌಸ್ನಲ್ಲಿ ಪುತ್ರ ನಿಖಿಲ್ ಹಾಗೂ ರೇವತಿ ವಿವಾಹ ಕಾರ್ಯಕ್ರಮ ನೇರವೇರಲಿದೆ. ಈ ಮೊದಲು ಬೆಂಗಳೂರಿನ ಹೆಚ್‌ಡಿಕೆ ನಿವಾಸದಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿತ್ತು. ಸದ್ಯದ ಕೊವಿಡ್ 19 ಪರಿಸ್ಥಿತಿಯಲ್ಲಿ ನಮ್ಮ ಕುಟುಂಬದ ಕಾರ್ಯಕ್ರಮದ ಮೂಲಕವೂ ಜನತೆಗೆ ಯಾವುದೇ ಸಮಸ್ಯೆ ಆಗಬಾರದು. ನಮ್ಮ ಕುಟುಂಬದಲ್ಲೇ 12 ರಿಂದ 13 ಮಂದಿ ವೈದ್ಯರಿದ್ದಾರೆ. ಅವರೆಲ್ಲರೊಂದಿಗೆ ಚರ್ಚಿಸಿಯೇ ಅಂತಿಮ ನಿರ್ಧಾರ ಕೈಗೊಂಡಿದ್ದೇನೆ. ಯಾರೂ ಕೂಡ ಅನ್ಯತಾ ಭಾವಿಸಬಾರದು. ಕಾರ್ಯಕರ್ತರು ಮತ್ತು ಅಭಿಮಾನಿಗಳೂ ಯಾರೂ ಕೂಡ ಇಲ್ಲಿಗೆ ಬಾರದೇ ಮನೆಯಿಂದಲೇ ಹಾರೈಸಿ. ನಿಮ್ಮ ಎಲ್ಲರನ್ನು ಆಹ್ವಾನಿಸಿಯೇ ಆರತಕ್ಷತೆ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
ನನ್ನ ಮಗನ ಮದುವೆಯನ್ನು ಏಪ್ರಿಲ್ 17 ರಂದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು, ಸಂಬಂಧಿಕರು, ಹಿತೈಷಿಗಳ ಸಮ್ಮುಖದಲ್ಲೇ ಮದುವೆಯ ಮಾಡಬೇಕು ಎಂಬ ನಿರ್ಧಾರವಾಗಿತ್ತು. ಅಷ್ಟರಲ್ಲಿ ಇಡೀ ವಿಶ್ವಾದ್ಯಂತ ಕೋವಿಡ್ ಸಮಸ್ಯೆ ಆಗಿದೆ. ಕೊನೆಯ ಹಂತದಲ್ಲಿ ಮನೆಯಲ್ಲಿ ವಿವಾಹ ಮಾಡುವ ನಿರ್ಧಾರ ಮಾಡಿದ್ದೇವೆ. ಸರ್ಕಾರದ ಮಾರ್ಗ ಸೂಚನೆಗಳು ಉಲ್ಲಂಘನೆಯಾಗಬಾರದು ಅಂತ ಕೊನೆ ಘಳಿಗೆಯಲ್ಲಿ ವಿವಾಹ ಮಾಡಬೇಕು ಎಂದು ನಿರ್ಧರಿಸಿದ್ದೇವೆ.
ಬೆಂಗಳೂರನ್ನು ಇಂದು ರೆಡ್ ಝೋನ್ ಎಂದು ಘೋಷಿಸಲಾಗಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಶತಕದ ಸಮೀಪಕ್ಕೆ ಬರುತ್ತಿದೆ. ಮೊದಲಿನಿಂದಲೂ ರಾಮನಗರದಲ್ಲೇ ಪುತ್ರನ ಮದುವೆ ಮಾಡಬೇಕೆಂದು ಹೇಳುತ್ತಿದ್ದೆ. ನನ್ನ ಅದೃಷ್ಟವೇನೋ ಗ್ರೀನ್ ಝೋನ್ ಜಿಲ್ಲೆಗಳ ಪೈಕಿ ರಾಮನಗರವೂ ಒಂದು. ಇಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವಿಕೆ ಭೀತಿಯಿಂದ ಸಭೆ, ಸಮಾರಂಭಗಳು, ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಸರ್ಕಾರ ನಿಷೇಧ ಹೇರಿದೆ.