ರಾಮನಗರ: ನಿನ್ನೆ ಸಂಜೆ ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಮೊದಲ ದಿನದ ಪಾದಯಾತ್ರೆ ಮುಕ್ತಾಯಗೊಳಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ವಿವಿಧ ಚಟುವಟಿಕೆ ಮೂಲಕ ಗಮನ ಸೆಳೆದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಹುಟ್ಟೂರು ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಬಾಲ್ಯದ ಗೆಳೆಯ, ತಮ್ಮ ಹಳೇಯ ಕ್ಷೌರಿಕ ನಾಗರಾಜ್ ಅವರಿಂದ ಇಂದು ಬೆಳಗ್ಗೆ ಕ್ಷೌರ ಮಾಡಿಸಿಕೊಂಡರು. ಬೆಳಗ್ಗೆ ಬೇಗನೆ ಎದ್ದ ಅವರು, ಸ್ನೇಹಿತನನ್ನು ಮನೆಗೆ ಕರೆಸಿಕೊಂಡು ಕ್ಷೌರ ಮಾಡಿಸಿಕೊಂಡರು. ಇದೇ ಸಂದರ್ಭ ಸ್ಥಳೀಯವಾಗಿ ಆಗಿರುವ ಬದಲಾವಣೆ ಮತ್ತು ಪಾದಯಾತ್ರೆ ವಿಚಾರವಾಗಿ ಜನರ ಅಭಿಪ್ರಾಯ ಪಡೆದುಕೊಂಡರು.
ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಎಫ್ಐಆರ್ ದಾಖಲು
ಇದಾದ ಬಳಿಕ ಸೋಮವಾರದ ಪಾದಯಾತ್ರೆ ಆರಂಭಿಸುವ ಮೊದಲು ತಮ್ಮ ಹುಟ್ಟೂರು ಸಾತನೂರಿನ ದೊಡ್ಡಾಲಹಳ್ಳಿಯ ನಿವಾಸದಲ್ಲಿ ಪೂಜೆ ಸಲ್ಲಿಸಿದರು. ದೇವರ ಬಳಿ ಪಾದಯಾತ್ರೆ ಯಶಸ್ಸಿಗೆ ಹಾರೈಸಿದರು. ಅನಾರೋಗ್ಯ ಹಿನ್ನೆಲೆ ನಿನ್ನೆ ಪಾದಯಾತ್ರೆಯಿಂದ ಅರ್ಧಕ್ಕೆ ಬೆಂಗಳೂರಿಗೆ ತೆರಳಿದ್ದ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಇಂದಿನ ಪಾದಯಾತ್ರೆ ಮುಂದುವರಿಯಲಿದೆ. ಉಳಿದ ನಾಯಕರು ಡಿಕೆಶಿಗೆ ಸಾಥ್ ನೀಡಲಿದ್ದಾರೆ.
ನಾಳೆ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ
ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೈದ್ಯರ ಸಲಹೆ ಮೇರೆಗೆ ಇಂದು ವಿಶ್ರಾಂತಿ ಪಡೆಯಲಿದ್ದಾರೆ. ನಿನ್ನೆ ಜ್ವರ ಹಾಗೂ ಮೈ-ಕೈ ನೋವು ಕಾಣಿಸಿಕೊಂಡ ಹಿನ್ನೆಲೆ ಪಾದಯಾತ್ರೆ ಮೊಟಕುಗೊಳಿಸಿ ವಾಪಸ್ ತೆರಳಿದ್ದರು. ನಾಳೆಯಿಂದ ಸಿದ್ದರಾಮಯ್ಯ ಅವರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.