ರಾಮನಗರ: ಧರ್ಮದ ಪರ ನಿಲ್ಲಬೇಕಾದ ಡಿಕೆ ಬ್ರದರ್ಸ್ ಓಟು-ನೋಟು, ಸೀಟಿಗಾಗಿ ಕ್ರೈಸ್ತರ ಪರನಿಲ್ಲುತ್ತಿದ್ದಾರೆ. ಮುನೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಏಸು ಪ್ರತಿಮೆ ನಿರ್ಮಿಸುವ ಮೂಲಕ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರ್ಎಸ್ಎಸ್ ದಕ್ಷಿಣ ಪ್ರಾಂತ್ಯ ವಿಭಾಗದ ಮುಖ್ಯಸ್ಥ ಡಾ. ಕಲ್ಲಡ್ಕ ಪ್ರಭಾಕರ ಭಟ್ ಗಂಭೀರ ಆರೋಪ ಮಾಡಿದರು.
ಕನಕಪುರದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಮ್ಮಿಕೊಂಡಿದ್ದ ಕನಕಪುರ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ನಾನು ಡಿಕೆ ಬ್ರದರ್ಸ್ಗೆ ಕೇಳ್ತೇನೆ ನಿಮ್ಮ ಅಪ್ಪ ಅಮ್ಮ ನಿಮಗೆ ಶಿವಕುಮಾರ ಸುರೇಶ ಅಂದ್ರೆ ಶಿವ ಅಂತಾ ಹೆಸರು ಇಟ್ಟಿದ್ದಾರೆ ಮುಂದಿನ ನಿಮ್ಮ ಪೀಳಿಗೆ ಕೂಡ ಹಾಗೆ ಉಳಿಯಲಿ, ಮಹಮ್ಮದ್ , ಟೋನಿ ಆಗದಿರಲಿ ಎಂದರು.
ನೀವು ಧರ್ಮ ವಿರೋಧಿ ಕೆಲಸ ಮಾಡಬೇಡಿ ನೀವು ವೋಟ್ ಬ್ಯಾಂಕ್ಗಾಗಿ ಕೆಲಸ ಮಾಡ್ತಿದ್ದೀರಾ, ಸೀಟು ಓಟು ಮತ್ತು ನೋಟು ನಿಮಗೆ ಮುಖ್ಯವಾಯ್ತಾ ಎಂದು ಪ್ರಶ್ನಿಸಿದ ಅವರು ನಾನ್ಯಾರು ಗೊತ್ತಿಲ್ಲಾ ಅಂತಾರೆ ಅದನ್ನ ತಿಳಿಯುವ ಔಚಿತ್ಯ ಕೂಡ ನನಗಿಲ್ಲಾ ಎಂದ ಅವರು ಶ್ರೀರಾಮುಲು ಮಗಳ ಮದುವೆಯಲ್ಲಿ ಮಾತನಾಡಿದ್ದು ಅವರು ಮುಂದೆ ಹೋಗ್ತಿದ್ರು ನಾನು ಹಿಂದೆ ಕೊನೆಗೆ ಹೋಗ್ತಿದ್ದವನನ್ನ ವಾಪಸ್ ಬಂದು ಮಾತನಾಡಿಸಿದ್ರೂ, ಆದರೆ ಈಗ ಗೊತ್ತಿಲ್ಲ ಅಂತಾರೆ ಅದೇ ಕಲ್ಲಡ್ಕ ಪ್ರಭಾಕರ್ ನಿಮ್ಮೂರಲ್ಲಿ ನಿಂತಿದ್ದೇನೆ ಎನ್ನುವ ಮೂಲಕ ಲೇವಡಿ ಮಾಡಿದರು.
ನಾವು ಮತಾಂತರ ಮಾಡಿಲ್ಲ ರಾಷ್ಟ್ರೀಯತೆ ತುಂಬುತ್ತೇವೆ, ನಮ್ಮ ನಿಷ್ಟೆಯ ಪ್ರಶ್ನೆ ಈ ಭೂಮಿಯ ಗಾಳಿ ನೀರು ಪಡೆದಿದ್ದೀರಲ್ಲಾ ಅದರ ಋಣ ತೀರಿಸಬೇಕಿತ್ತು ಅದನ್ನ ಬಿಟ್ಟು ಅದರ ವಿರುದ್ಧ ನೀವಿದ್ದೀರಾ ಅದಕ್ಕಾಗಿಯೇ ನಮ್ಮ ಹೊರಾಟ ಎಂದ ಅವರು ಲಕ್ಷಾಂತರ ಜನ ಹಿಂದೂಗಳು ಹೊರದೇಶಗಳಲ್ಲಿ ಕೊಲೆ ಸುಲಿಗೆ ಅತ್ಯಾಚಾರದ ಸಮಸ್ಯೆ ಎದುರಿಸುತ್ತಿದ್ದಾರಲ್ಲಾ ಅವರನ್ನ ಉಳಿಸುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಇದೆ. ಪೌರತ್ವ ಕೊಡುವ ಕಾಯ್ದೆ ಹೊರತು ತೆಗೆಯುವುದಲ್ಲ, ಇದು ದೇಶಕ್ಕಾಗಿ ಇರುವ ಕಾಯ್ದೆ ಇಲ್ಲಿರುವ ಯಾವೊಬ್ಬ ದೇಶಪ್ರೇಮಿ ಮುಸ್ಲೀಂರಿಗೂ ತೊಂದರೆಯಿಲ್ಲ ಎಂದು ಸಮರ್ಥಿಸಿಕೊಂಡರು.
ಒಟ್ಟಾರೆ ಡಿಕೆ ಬ್ರದರ್ಸ್ ಕೋಟೆಯಲ್ಲಿ ಕೇಸರಿ ಧ್ವಜ ಇಂದು ಸದ್ದು ಮಾಡಿತ್ತು.ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸರು ಸರ್ಪಗಾವಲು ಬಿಗಿಬಂದೂಬಸ್ತ್ ಏರ್ಪಡಿಸಿದ್ದರು. ಅಯ್ಯಪ್ಪ ದೇವಾಲಯದಿಂದ ಹೊರಟ ರ‍್ಯಾಲಿ ಚನ್ನಬಸಪ್ಪ ಸರ್ಕಲ್ನಲ್ಲಿ ಸಮಾವೇಶಗೊಂಡು ಬಳಿಕ ತಹಶೀಲ್ದಾರ್ ವರ್ಷಾ ಅವರಿಗೆ ಮನವಿ ಸಲ್ಲಿಸಿದರು.