ರಾಮನಗರ : ನಗರದ ಹೊರವಲಯದಲ್ಲಿ ಆಟೋದಲ್ಲಿ ಸಾಗಿಸುತ್ತಿದ್ದ ಎಳೆ ಕರುಗಳನ್ನು ಸಾರ್ವಜನಿಕರೇ ಕಂಡು ಹಿಡಿದು ಆರೋಪಿಗೆ ಥಳಿಸಿ ನಂತರ ಪೋಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕಾಗಮಿಸಿದ್ದ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಹಾಗೂ ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಐದಾರು ಸೀಮೆಕರುಗಳನ್ನು ಬಂಧಮುಕ್ತಗೊಳಿಸಿ ಹೆದ್ದಾರಿಯಲ್ಲಿ ಬಿಡಲಾಗಿತ್ತು. ನಂತರ ಬಿಜಿಎಸ್ ಅಂಧರ ಶಾಲೆಯ ಗೋ ಶಾಲೆಗೆ ನೀಡುವ ಬಗ್ಗೆ ಸ್ಥಳೀಯರು ಆಸಕ್ತಿ ವಹಿಸಿದ್ದಾರೆ.
ಚನ್ನಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಹುಟ್ಟಿದ ಕೂಡಲೇ ರೈತರು ಸೀಮೆಕರುಗಳನ್ನು ಕಟುಕರಿಗೆ ಮಾರುವ ಸಂಸ್ಕೃತಿ ಮುಂದುವರಿಸಿದ್ದಾರೆ. ಅಲ್ಲದೆ ಮಾಂಸಕ್ಕಾಗಿ ಇಂತಹ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.