ರಾಮನಗರ: ರಾಮನಗರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದೆ. ಹೆದ್ದಾರಿ ದುರಸ್ತಿಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರಯಾಣಿಕರು ಈ ಹೆದ್ದಾರಿಯ ಬದಲು ಬೇರೆ ಮಾರ್ಗದ ಮೂಲಕ ಸಂಚಾರ ಮಾಡುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.
ಹೆದ್ದಾರಿ ರಸ್ತೆ ದುರಸ್ತಿಗೊಂಡಿರುವುದರಿಂದ ಹಾಗೂ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಹೆದ್ದಾರಿಯಲ್ಲಿನ ಸುಗಮ ಪ್ರಯಾಣಕ್ಕೆ ತೊಂದರೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರು ಮೈಸೂರು ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಬೆಂಗಳೂರು-ಕನಕಪುರ-ಮೈಸೂರು ಮಾರ್ಗವಾಗಿ ಅಥವಾ ಬೆಂಗಳೂರು-ಕುಣಿಗಲ್-ಮೈಸೂರು ಮಾರ್ಗವಾಗಿ ಪ್ರಯಾಣ ಮಾಡುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನು, ಜಿಲ್ಲೆಯಾದ್ಯಂತ ವಿವಿಧೆಡೆ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಜನತೆ ನಲುಗಿ ಹೋಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಹಿನ್ನೆಲೆ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಹಾನಿಗೊಳಗಾದ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಅಧಿಕಾರಿಗಳ ಬಳಿ ಮಾಹಿತಿ ಪಡೆದಿರುವ ಸಿಪಿವೈ, ತಕ್ಷಣವೇ ನಿರಾಶ್ರಿತ ಕೇಂದ್ರ ಸೇರಿದಂತೆ ಪರಿಹಾರ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಧಾರಾಕಾರ ಮಳೆ..ಬೀದಿಗೆ ಬಂದ ನೂರಾರು ಕುಟುಂಬಗಳು